ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಸರಕಾರದ ಕೆಲ ಸಚಿವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ.
ವಿಧಾನಮಂಡಲದ ಅಧಿವೇಶನದಲ್ಲಿ ಬಜೆಟ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸೇರಿ ಬಹುತೇಕ ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದು ಕತ್ತೆ ಕಾಯ್ತಾ ಇದ್ದೀರಾ? ಎಂದು ಪ್ರಶ್ನಿಸಿದ್ದರು. ಬಸ್ ಸ್ವಚ್ಛವಾಗಿಡದಿದ್ದರೆ ಚಾಲಕರು, ನಿರ್ವಾಹಕರಿಗೆ ಒದೀರಿ ಎಂದು ಸಚಿವ ಅಶೋಕ್ ಹೇಳಿದ್ದಾರೆ. ಶ್ರೀರಾಮುಲು ಅವರನ್ನು ಮಮ್ತಾಜ್ ಆಲಿ ಖಾನ್ ಪ್ರವಾದಿಗೆ ಹೋಲಿಸಿದರೆ, ನವ್ಯ ಕಲಾವಿದರ ಬೆನ್ನ ಹಿಂದೆ ಸಚಿವ ರಾಮಚಂದ್ರಗೌಡ ಬಿದ್ದಿದ್ದರೆ. ಇವರಿಗೆಲ್ಲ ವೈದ್ಯಕಿಯ ತಪಾಸಣೆ ನಡೆಸಿ ಎಂದು ಚುಚ್ಚಿದರು.
ತಕ್ಷಣ ಪ್ರತಿಕ್ರಿಯಿಸಿದ ಸಚಿವ ಅಶೋಕ್, ನಾನು ಅಂಥ ಹೇಳಿಕೆ ನೀಡಲೇ ಇಲ್ಲ. ಅದು ಒಂದೇ ಪತ್ರಿಕೆಯಲ್ಲಿ ವರದಿಯಾಗಿದೆ. ಇತರ ಯಾವುದೇ ಮಾಧ್ಯಮಗಳಲ್ಲಿ ವರದಿಯಾಗಿಲ್ಲ. ನಾನು ಹಾಗೇ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹಾಗಿದ್ದರೆ ಅಶೋಕ್ ಅವರನ್ನು ಬಿಟ್ಟುಬಿಡಿ ಎಂದು ಖರ್ಗೆ ಹೇಳಿದರು. ಆಗ ಎದ್ದುನಿಂತ ಸುರೇಶ್ ಕುಮಾರ್ , ಮಮ್ತಾಜ್ ಆಲಿ ಖಾನ್ ನಿನ್ನೆಯೇ ಸ್ಪಷ್ಟನೆ ನೀಡಿದ್ದಾರೆ ಎಂದಾಗ ಸಭಾಧ್ಯಕ್ಷ ಜಗದೀಶ್ ಶೆಟ್ಟರ್, ಹಾಗಿದ್ದರೆ ರಾಮಚಂದ್ರಗೌಡರನ್ನೂ ಸದನಕ್ಕೆ ಕರೆಯಿಸಿ ಹೇಳಿಕೆ ನೀಡಿಸಿ ಎಂದು ಕುಟುಕಿದರು. |