ಕನ್ನಡ ಚಲನಚಿತ್ರ ಮಹೋತ್ಸವದ ಮೂರು ದಿನಗಳ ಕಾರ್ಯಕ್ರಮವನ್ನು ಎರಡು ದಿನಗಳಿಗೆ ಮೊಟಕುಗೊಳಿಸುವ ಸಾಧ್ಯತೆಗಳಿವೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.
ಮಾರ್ಚ್ 1 ರಂದು ಮನೋರಂಜನಾ ಕಾರ್ಯಕ್ರಮ, 2 ರಂದು 108 ಕಲಾವಿದರಿಗೆ ಸನ್ಮಾನ ಹಾಗೂ ಮೂರನೇ ತಾರೀಕಿನಂದು 75 ಸಾಕ್ಷ್ಯಚಿತ್ರಗಳ ಪ್ರದರ್ಶನ ಎಂದು ನಿಗದಿಪಡಿಸಲಾಗಿತ್ತು. ಸಾಕ್ಷ್ಯಚಿತ್ರ ಪ್ರದರ್ಶನದ ಜವಾಬ್ದಾರಿಯನ್ನು ಹಿರಿಯ ನಟ ಶಿವರಾಂ ಅವರಿಗೆ ವಹಿಸಲಾಗಿತ್ತು. ಆದರೆ ಶಿವರಾಂ ಅವರು ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮದ ರೂಪುರೇಷೆ ತಯಾರಿ ಇನ್ನೂ ಪೂರ್ಣಗೊಳಿಸದ ಕಾರಣ ಅಮೃತ ಮಹೋತ್ಸವವನ್ನು ಎರಡು ದಿನ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಸಾಕ್ಷ್ಯಚಿತ್ರ ಪ್ರದರ್ಶನವನ್ನು ನಾವು ನಡೆಸುತ್ತೇವೆ ಎಂದು ನಿರ್ಮಾಪಕರ ಸಂಘ ವಾಣಿಜ್ಯ ಮಂಡಳಿಯನ್ನು ಕೇಳಿಕೊಂಡಿದೆ ಎನ್ನಲಾಗಿದೆ.
ಅಮೃತ ಮಹೋತ್ಸವದ ಸುತ್ತ ಸುತ್ತುತ್ತಿರುವ ಮತ್ತೊಂದು ಅಂಶವೆಂದರೆ, ಆಹ್ವಾನ ಪತ್ರಿಕೆ ಮುದ್ರಣ ಪೂರ್ಣಗೊಂಡಿಲ್ಲ. ಯಾರಿಗೂ ಆಹ್ವಾನ ಪತ್ರಿಕೆ ತಲುಪಿಲ್ಲ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದಲ್ಲಿ 75 ದಿವಂಗತ ಕಲಾವಿದರ ಕುರಿತು ಪುಸ್ತಕ ಪ್ರಕಟಿಸಲಾಗಿದೆ.
ಇದಕ್ಕೆ 75ಮಂದಿ ಲೇಖನ ಬರೆದಿದ್ದಾರೆ. ಲೇಖಕರಿಗೆ ಅಧಿಕೃತ ಆಹ್ವಾನ ಪತ್ರಿಕೆ ಇನ್ನೂ ತಲುಪಿಲ್ಲದ ಕಾರಣ ಬರಗೂರು ಅವರೇ ಪತ್ರ ಬರೆದು ಬರಹಗಾರರಿಗೆ ಪತ್ರ ಬರೆದು ಇದನ್ನೇ ಆಹ್ವಾನ ಪತ್ರಿಕೆ ಅಂದುಕೊಂಡು ಸಮಾರಂಭಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ. ಹೀಗೆ ಅಮೃತ ಮಹೋತ್ಸವ ಸಂಭ್ರಮ ಈಗ ಗೊಂದಲದ ಗೂಡಾಗಿದೆ. |