ಮಂಪರು ಪರೀಕ್ಷೆ ಮೂಲಕ ದೇಶದಲ್ಲೇ ಪ್ರಚಾರ ಪಡೆದಿದ್ದ ವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕಿ ಸ್ಥಾನದಿಂದ ತಜ್ಞೆ ಡಾ.ಎಸ್.ಮಾಲಿನಿ ಅವರಿಗೆ ಗೇಟ್‌ಪಾಸ್ ನೀಡಲು ಸರ್ಕಾರ ನಿರ್ಧರಿಸಿದೆ.
ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ನಕಲಿ ಪ್ರಮಾಣ ಪತ್ರ ನೀಡಿ ಮಂಪರು ಪರೀಕ್ಷೆ ವಿಭಾಗದ ಸಹಾಯಕ ನಿರ್ದೇಶಕರ ಹುದ್ದೆಗೆ ಏರಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದರು. ಗುತ್ತಿಗೆ ಆಧಾರದಲ್ಲಿದ್ದ ಆ ಹುದ್ದೆಯನ್ನು ಇತ್ತೀಚೆಗೆ ಕಾಯಂಗೊಳಿಸಿದ್ದು, ಅವರು ಪ್ರೊಬೆಷನರಿ ಅವಧಿಯಲ್ಲಿದ್ದರು.
ಮಾಲಿನಿ ಅವರನ್ನು ಕೂಡಲೇ ಕೆಲಸದಿಂದ ತೆಗೆದುಹಾಕುವಂತೆ ಪ್ರತಿಪಕ್ಷಗಳು ಒಕ್ಕೊರಲಿನಿಂದ ಆಗ್ರಹಿಸಿದವು. ಆರಂಭದಲ್ಲಿ ಈ ಬೇಡಿಕೆಗೆ ಒಪ್ಪದ ಡಾ.ವಿ.ಎಸ್.ಆಚಾರ್ಯ ಅವರನ್ನು ರಕ್ಷಿಸಲು ಪ್ರಯತ್ನಿಸಿದರು.
ಈ ಅಧಿಕಾರಿ ರಾಜ್ಯದ ಭದ್ರತೆಗೆ ಕಂಟಕ ಎಂದು ಮಾಜಿ ಡಿಜಿಪಿ ಶ್ರೀಕುಮಾರ್ ಗೃಹ ಸಚಿವರಿಗೆ ನಾಲ್ಕು ಬಾರಿ ಪತ್ರ ಬರೆದರೂ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ. ಇದನ್ನು ಗಮನಿಸಿದರೆ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳೆ ಭದ್ರತೆಗೆ ಕಂಟಕ ಎಂದೆನಿಸುತ್ತದೆ ಎಂದು ಜೆಡಿಎಸ್‌ನ ಎಂ.ಸಿ.ನಾಣಯ್ಯ ಛೇಡಿಸಿದ್ದರು. ಮಾಲಿನಿ ಅವರ ವಜಾಕ್ಕೆ ಪ್ರತಿಪಕ್ಷಗಳು ತೀವ್ರ ಒತ್ತಡ ಹೇರಿದ್ದರಿಂದ ಸರಕಾರ ಆ ಒತ್ತಡಕ್ಕೆ ಮಣಿದಿದೆ. |