ಮಹಾರಾಷ್ಟ್ರದ ಜನಪ್ರತಿನಿಧಿಗಳು ಭಯೋತ್ಪಾದಕರಿಗಿಂತಲೂ ಅಪಾಯಕಾರಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಕಟುವಾಗಿ ಆರೋಪಿಸಿದ್ದಾರೆ. ಬೆಳಗಾವಿ ಗಡಿಗೆ ವಿಚಾರ ಕುರಿತಂತೆ ತಗಾದೆ ತೆಗೆಯುತ್ತಿರುವ ನಾಡದ್ರೋಹಿ ಎಂಇಎಸ್ ಶಾಸಕದ್ವಯರಿಗೆ ಕರ್ನಾಟಕ ವಿಧಾನಸೌಧದ ಮೆಟ್ಟಿಲು ಹತ್ತಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕೊಲ್ಲಾಪುರ ಭವ್ಯ ಸೀಮಾ ಪರಿಷದ್‌ನಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಛಗನ್ ಭುಜಬಲ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಆಕ್ರೋಶ ವ್ಯಕ್ತಪಡಿಸಿದರು. ಗಡಿಭಾಗದಲ್ಲಿ ಇರುವ ಮರಾಠಿಗರಿಗೆ ಅನ್ಯಾಯವಾದರೆ ರಕ್ತ ಹರಿಸಲು ತಾವು ಹಿಂಜರಿಯುವುದಿಲ್ಲ ಎಂದು ಛಗನ್ ಇತ್ತೀಚೆಗಷ್ಟೇ ಕಿಡಿಕಾರಿದ್ದರು.ಮಾರ್ಚ್ 13 ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಸದ್ಯ ಬೆಳಗಾವಿ ಮಹಾನಗರ ಪಾಲಿಕೆ ಕನ್ನಡಿಗರ ಕೈಯಲ್ಲಿ ಇದೆ. ಆದರೆ, ಎಂಇಎಸ್ ಶಾಸಕರು ಪಾಲಿಕೆಯನ್ನು ಮರಾಠಿಗರ ತೆಕ್ಕೆಗೆ ತೆಗೆದುಕೊಳ್ಳಲು ಅನೇಕ ಸಂಚು ರೂಪಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಕೃತ್ಯವನ್ನು ಕನ್ನಡಿಗರು ಸಹಿಸುವುದಿಲ್ಲ. ಎಂಇಎಸ್ ಶಾಸಕರು ಇದೇ ರೀತಿ ಪುಂಡಾಟಿಕೆ ಮುಂದುವರಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ತಕ್ಕ ಪಾಠ ಕಲಿಸಲಿದೆ ಎಂದು ಗೌಡ ಎಚ್ಚರಿಕೆ ನೀಡಿದರು. ಬೆಳಗಾವಿ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಮಾರ್ಚ್ 26 ಮತ್ತು 27 ರಂದು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾಹಿತಿಗಳು, ನಾಡಿನ ಮಠಾಧೀಶರು ಒಳಗೊಂಡ ನಿಯೋಗ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಶೀಘ್ರದಲ್ಲಿ ಇತ್ಯರ್ಥಪಡಿಸುವಂತೆ ಒತ್ತಾಯಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು. |