ಹಿಂದಿನ ಸರ್ಕಾರಗಳು ಪಾಪ ಮಾಡಿವೆ. ಹಾಗಾಗಿ ಮಳೆ, ಬೆಳೆ ಆಗಲಿಲ್ಲ. ಈ ಪಾಪ ತೊಳೆಯಲು ದೇವರು, ಮಠಗಳಿಗೆ ಹಣ ಕೊಟ್ಟರೆ ಮಳೆ, ಬೆಳೆ ಆಗುತ್ತದೆ ಎಂಬುದು ನನ್ನ ನಂಬಿಕೆ. ಅದಕ್ಕಾಗಿ ಬಜೆಟ್‌ನಲ್ಲಿ ಮಠಗಳಿಗೆ, ದೇವರಿಗೆ ಹಣ ಕೊಟ್ಟಿದ್ದೇನೆ. ದೇವರು ನಮ್ಮ ಮೇಲೆ ಕೃಪೆ ತೋರುತ್ತಾನೆ ಎಂದು ಮಠಮಾನ್ಯಗಳಿಗೆ ಹಣ ನೀಡಿದ್ದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.
ಬಜೆಟ್ ಕುರಿತ ಚರ್ಚೆಯಲ್ಲಿ ಕಾಂಗ್ರೆಸಿನ ಸಿದ್ದರಾಮಯ್ಯ ವಿವಿಧ ಜಾತಿ, ಸಂಘಟನೆಗಳು, ಮಠಗಳಿಗೆ ಸರ್ಕಾರ ಬಜೆಟ್‌ನಲ್ಲಿ ಹಣ ಒದಗಿಸಿರುವುದನ್ನು ಬಲವಾಗಿ ವಿರೋಧಿಸಿದರು. ಆಗ ಮಧ್ಯಪ್ರವೇಶಿಸಿದ ಯಡಿಯೂರಪ್ಪ ಸಮರ್ಥನೆಗೆ ಮುಂದಾದರು. ಆಗ ಮಧ್ಯಪ್ರವೇಶಿಸಿದ ಮಲ್ಲಿಕಾರ್ಜುನ ಖರ್ಗೆ, ಪಂಡಿತ್ ಜವಾಹರಲಾಲ್ ನೆಹರು ಜಲಾಶಯಗಳು, ಕೆರೆಕಟ್ಟೆಗಳು ಆಧುನಿಕ ಭಾರತದಲ್ಲಿ ನಿಜವಾದ ದೇವಾಲಯಗಳು ಎಂದು ಹೇಳಿದ್ದನ್ನು ಉಲ್ಲೇಖಿಸಿದರು. ಆದರೆ, ಯಡಿಯೂರಪ್ಪ ನಾವು ದೇವರು ದಿಂಡರುಗಳಿಗೂ ಹಣ ಕೊಡ್ತೀವಿ. ಬೆಂಗಳೂರಿನ ಅಭಿವೃದ್ಧಿಯನ್ನೂ ಮಾಡ್ತೀವಿ ಎಂದರು.
ಕಾಗಿನೆಲೆ ಗುರುಪೀಠದ ಕಾರ್ಯಕ್ರಮದಲ್ಲಿ ನೀವು (ಸಿದ್ದರಾಮಯ್ಯ) ಭಾಗವಹಿಸಿ ಅಲ್ಲಿಗೆ ನೀಡಿರುವ 15 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಆಗಿರುವುದನ್ನು ನೋಡಿದ್ದೀರಿ. ಮಠಗಳಿಗೆ ಹಣ ಒದಗಿಸುವ ನೆಪದಲ್ಲಾದರೂ ಆ ಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ದಿಯಾಗುತ್ತಿರುವುದನ್ನು ಮೆಚ್ಚಬೇಕು ಎಂದರು.
|