ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಒಂದೊಮ್ಮೆ ಸ್ಪರ್ಧೆ ಅನಿವಾರ್ಯವಾದರೆ ಮಂಡ್ಯದಿಂದ ಕಣಕ್ಕಿಳಿಯುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ಸ್ಪರ್ಧೆಗೆ ಇಳಿಯುವಂತೆ ಹಾಸನದಲ್ಲಿ ಕಾರ್ಯಕರ್ತರಿಂದ ಒತ್ತಡ ಹೆಚ್ಚಿದೆ. ಸ್ಪರ್ಧಿಸಿದರೆ ಅಲ್ಲಿಂದಲೇ. ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದರು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಸ್ಪರ್ಧೆ ಖಚಿತ. ಶೀಘ್ರವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಜನಪರ ಕಾಳಜಿ ಇಟ್ಟುಕೊಂಡು ಹೋರಾಡುವವರ ವಿರುದ್ಧ ಪೊಲೀಸ್ ಪ್ರಕರಣಗಳನ್ನು ದಾಖಲು ಮಾಡುವ ಮೂಲಕ ರಾಜ್ಯ ಸರ್ಕಾರ ರಾಜಕೀಯ ಭಯೋತ್ಪಾದಕತೆ ಹುಟ್ಟು ಹಾಕುತ್ತಿದೆ ಎಂದು ಅವರು ಆರೋಪಿಸಿದರು.
ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆಗಿಳಿದವರಲ್ಲಿ ಬಳ್ಳಾರಿ ಬಂದ್‌ಗೆ ಮುನ್ನ ಕೆಲವರನ್ನು ಬಂಧಿಸಲಾಗಿದೆ. ಬಂದ್ ದಿನವೂ ಅನೇಕರನ್ನು ಬಂಧಿಸಿ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗಿದೆ ಎಂದರು.
ಬಳ್ಳಾರಿ ಸೇರಿದಂತೆ ಮೂರು ಜಿಲ್ಲೆಗಳಲ್ಲಿ ರಾಜಕೀಯ ಶಕ್ತಿ ಇರುವ ಮೂವರು ಸಚಿವರಿದ್ದಾರೆ. ಅವರುಗಳ ಮಾತಿಲ್ಲದೆ ಏನೂ ನಡೆಯುವಂತಿಲ್ಲ. ಅಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ರಾಜ್ಯದ ಕಂದಾಯ ಹಾಗೂ ಗೃಹ ಇಲಾಖೆ ಜನರ ಪಾಲಿಗೆ ಸತ್ತೇ ಹೋಗಿದೆ ಎಂದು ಗೌಡರು ಕಿಡಿಕಾರಿದರು.
|