ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು ರಾತ್ರಿ ವೇಳೆ ವಾಸ್ತವ್ಯ ಹೂಡಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ಸುಧಾರಣೆಗೆ ಶೀಘ್ರವೇ ಹೊಸ ನೀತಿ ರೂಪಿಸುವುದಾಗಿ ಹೇಳಿದ ಅವರು, ಏನೇ ಸಮಸ್ಯೆಗಳಿದ್ದರೂ ಆರೋಗ್ಯ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಎಲ್ಲರೂ ಒಪ್ಪಬೇಕು. ಮುಂದಿನ ದಿನಗಳಲ್ಲಿ ನಾನು ಜಿಲ್ಲಾಸ್ಪತ್ರೆಗಳಿಗೆ ಭೇಟಿ ಕೊಡುತ್ತೇನೆ. ಒಟ್ಟಾರೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ವಿದ್ಯುತ್, ಸರಿಯಾದ ಶೌಚಾಲಯ, ನೀರಿನ ವ್ಯವಸ್ಥೆ ಇರದಿದ್ದರೆ ಜಿಲ್ಲಾ ಆರೋಗ್ಯಾಧಿಕಾರಿಗಳನ್ನೇ ಹೊಣೆಯಾಗಿಸಬೇಕು. ಇಲ್ಲದಿದ್ದರೆ ಬಡವರಿಗೆ ಉಪಯೋಗವಾಗುವುದಿಲ್ಲ. ಆರೋಗ್ಯ ಕವಚ ಯೋಜನೆ ಜಾರಿಗೆ ತಂದರೂ ಲಾಭವಿಲ್ಲ ಎಂದು ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 5021 ಅರೆ ವೈದ್ಯ ಸಿಬ್ಬಂದಿ ಹುದ್ದೆಗಳನ್ನು ವಿಶೇಷ ನೇರ ನೇಮಕದ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು. |