ಸಮುದ್ರದ ಪಾಲಾಗುತ್ತಿರುವ ಪಶ್ಚಿಮ ಘಟ್ಟ ನದಿಗಳ ನೀರು ಬಳಕೆ ಕುರಿತು ಸಾಧಕ, ಬಾಧಕಗಳ ಅಧ್ಯಯನದ ನಂತರ ಯೋಜನೆ ಜಾರಿಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನೇತ್ರಾವತಿ ತಿರುವು ಮತ್ತು ಸೌಭಾಗ್ಯ ಸಂಜೀವಿನಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಗಂಭೀರ ಪರೀಶೀಲನೆ ನಡೆಸಿದೆ. ಈ ಕುರಿತು ಡಾ. ಪರಮಶಿವಯ್ಯ ವರದಿ ಜತೆಗೆ ಆಧುನಿಕ ತಂತ್ರಜ್ಞಾನ ಬಳಕೆ ಕುರಿತಂತೆ ತಜ್ಞರ ಜತೆ ಸಮಾಲೋಚಿಸಲಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.
ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸಲು ಈ ಭಾಗದಲ್ಲಿ ದೊಡ್ಡ ನದಿ ಮೂಲಗಳಿಲ್ಲ. ಶಾಶ್ವತ ಪರಿಹಾರಕ್ಕೆ ಕೆಲ ಮಹತ್ವದ ತೀರ್ಮಾನ ಆಗಬೇಕು. ಈ ಬಗ್ಗೆ ಪರಮಶಿವಯ್ಯ ಜತೆ ನಾಲ್ಕು ಸುತ್ತು ಚರ್ಚಿಸಿ ವಿವರ ಪಡೆಯಲಾಗಿದೆ.
ಪಶ್ಚಿಮಘಟ್ಟಗಳಲ್ಲಿ ಹರಿಯುವ ನದಿಗಳ 2 ಸಾವಿರ ಟಿಎಂಸಿಗಳಿಗೂ ಹೆಚ್ಚು ನೀರು ಸಮುದ್ರ ಪಾಲಾಗುತ್ತಿದೆ. ಅದನ್ನು ಮಧ್ಯ ಭಾಗಕ್ಕೆ ತರುವ ಯತ್ನದಲ್ಲಿ ಸರಕಾರ ಮೀನ ಮೇಷ ಎಣಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. |