ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಆಡುಭಾಷಾ ಪದಕೋಶ ಸಂಗ್ರಹ ತಕ್ಷಣದ ಅನಿವಾರ್ಯತೆ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಆಡುಭಾಷಾ ಪದಕೋಶ ಸಂಗ್ರಹ ತಕ್ಷಣದ ಅನಿವಾರ್ಯತೆ'
ಭಾಷಾಂತರಕ್ಕೆ ವಿದ್ವಾಂಸರೆಲ್ಲಿದ್ದಾರೆ?
AvinashWD
ಶಾಸ್ತ್ರೀಯ ಭಾಷೆ ಸ್ಥಾನ ಮಾನ ದೊರೆತ ಭಾಷೆಯ ಅಭಿವೃದ್ಧಿಗೆ ಸಮಸ್ಯೆಯಾಗುವುದು ಹಣವಲ್ಲ, ಆದರೆ ಸರಕಾರ ನೀಡುವ ಹಣವನ್ನು ಯಾವ ರೀತಿಯಾಗಿ ಸಮರ್ಪಕವಾಗಿ ಸದುಪಯೋಗಕ್ಕಾಗಿ ಬಳಸಿಕೊಳ್ಳಬಹುದು ಎಂಬ ಕುರಿತಾದ ಯೋಜನೆ ಮುಖ್ಯ ಎಂದು ಚೆನ್ನೈನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು ಪ್ರಭಾರ ಅಧಿಕಾರಿ ಪ್ರೊ.ಕೆ.ರಾಮಸ್ವಾಮಿ ಸಲಹೆ ನೀಡಿದ್ದಾರೆ.

ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗವು ವಿವಿ ಆವರಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ 'ಶಾಸ್ತ್ರೀಯ ಭಾಷೆಗಳ ವೈಶಿಷ್ಟ್ಯ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಅನುಭವದ ಆಧಾರದಲ್ಲಿ ಕನ್ನಡ-ತೆಲುಗು ಭಾಷೆಗಳು ಯಾವ ರೀತಿ ಯೋಜನೆ ರೂಪಿಸಿಕೊಳ್ಳಬಹುದು ಎಂಬ ಕುರಿತು ಅಮೂಲ್ಯ ಸಲಹೆಗಳನ್ನು ನೀಡಿದರು.

ಮೂಲತಃ ಸಂಸ್ಕೃತ ಪ್ರೊಫೆಸರ್ ಆಗಿದ್ದ, ತಮಿಳು ಪ್ರೊಫೆಸರ್ ಸೂರ್ಯನಾರಾಯಣ ಶಾಸ್ತ್ರಿ ಅವರು ತಮಿಳಿಗೆ ಶಾಸ್ತ್ರೀಯ ಸ್ಥಾನ ಮಾನ ನೀಡುವ ಕುರಿತಂತೆ 1887ರಲ್ಲೇ ಧ್ವನಿ ಎತ್ತಿದ್ದು, 80 - 90ರ ದಶಕದಲ್ಲಿ ರಾಜಕೀಯ ಪಕ್ಷಗಳು, ತಮಿಳು ಸಾಹಿತ್ಯ ಲೋಕವು ಒತ್ತಡ ಹೇರಿದ ಕಾರಣದಿಂದ ಕ್ಲಾಸಿಕಲ್ ಎಂಬ ಮಾನ್ಯತೆ ಪಡೆದುಕೊಂಡಿತು ಎಂದು ವಿವರಿಸಿದ ಅವರು, ತಮಿಳಿಗೆ 2300 ವರ್ಷಗಳ ದಾಖಲಿತ ಇತಿಹಾಸವಿದೆ. ಸಹಜವಾಗಿ ಸಿಗಬೇಕಾಗಿದ್ದ ಶಾಸ್ತ್ರೀಯ ಸ್ಥಾನಮಾನವನ್ನು 120 ವರ್ಷಗಳ ಕಾಲದ ಪ್ರತಿಭಟನೆ, ಚಳವಳಿ ಮೂಲಕ ಪಡೆದುಕೊಳ್ಳಬೇಕಾಗಿರುವುದು ವಿಷಾದನೀಯ ಎಂದರು.

ನಿಧಿಯ ಸದ್ಬಳಕೆ ಪ್ರಸ್ತಾವನೆ ಮುಖ್ಯ:
ಶಾಸ್ತ್ರೀಯ ಸ್ಥಾನಮಾನ ದೊರೆತ ಭಾಷೆ ಅಭಿವೃದ್ಧಿ ಎದುರಾಗುವ ಸಮಸ್ಯೆಗಳನ್ನು ತಮಿಳಿನ ಅನುಭವದ ಆಧಾರದಲ್ಲಿ ವಿವರಿಸಿದ ಅವರು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ನಿಧಿ ಒದಗಿಸುತ್ತವೆ. ಆದರೆ ಆ ನಿಧಿಯಲ್ಲಿ ಭಾಷೆಯ ಅಭಿವೃದ್ಧಿಗೆ ಏನೇನು ಮಾಡುತ್ತೀರಿ ಎಂಬ ಬಗ್ಗೆ ಸಮಗ್ರವಾದ ಯೋಜನಾಬದ್ಧ ಪ್ರಸ್ತಾವನೆ ಸಲ್ಲಿಸದಿದ್ದರೆ ನಯಾ ಪೈಸೆಯೂ ಸಿಗುವುದು ಕಷ್ಟ ಎಂದು ಹೇಳಿದರು.

ಆಡು ಭಾಷೆಯ ಶಬ್ದಕೋಶ
ಶಾಸ್ತ್ರೀಯ ಸ್ಥಾನಮಾನ ದೊರೆಯಲು ಬೇಕಾಗಿರುವ ನಿಬಂಧನೆಗಳಲ್ಲಿ ಪ್ರಾಚೀನತೆಯ ಮಾನದಂಡ ವಿಭಿನ್ನ ಭಾಷೆಗಳಿಗೆ ವಿಭಿನ್ನವಾಗಿರುತ್ತದೆ. ಸಂಸ್ಕೃತಕ್ಕೆ ಅಂದಾಜು ಕ್ರಿ.ಪೂ. 1000, ಇಂಗ್ಲಿಷಿಗೆ 18ನೇ ಶತಮಾನ, ತಮಿಳಿಗೆ ಕ್ರಿ.ಶ.600... ಹೀಗೆ ಬೇರೆಯೇ ಮಾನದಂಡವಿರುವಾಗ ಇಲ್ಲಿ ಪ್ರಾಚೀನ ಭಾಷೆ ಎಂಬ ಕುರಿತ ವಾದ ವಿವಾದ ಅನಗತ್ಯ ಎಂದು ಹೇಳಿದ ಪ್ರೊ.ರಾಮಸ್ವಾಮಿ, ಲಿಖಿತ ಸಾಹಿತ್ಯಕ್ಕಿಂತಲೂ ಪಾರಂಪರಿಕ, ಮೌಖಿಕ ಸಾಹಿತ್ಯ ಹೆಚ್ಚು ಪ್ರಾಚೀನವೂ, ಅಮೂಲ್ಯವೂ, ಸಂಪತ್ಭರಿತವೂ ಆಗಿದ್ದು, ಅದರ ರಕ್ಷಣೆ ಈಗಿನ ಅಗತ್ಯ ಎಂದರು.

ಆಡುಭಾಷೆಯ ಪದಗಳ ರಕ್ಷಣೆಯಾಗಬೇಕಿದೆ. ಹಳೆ ಪೀಳಿಗೆಯವರ ಬಾಯಲ್ಲಿ ಈಗಲೂ ನಲಿದಾಡುತ್ತಿರುವ ಪ್ರಾದೇಶಿಕ, ಸಾಂಸ್ಕೃತಿಕ, ಜನಾಂಗೀಯ ವೈವಿಧ್ಯತೆಗಳಿರುವ ಈ ಅಮೂಲ್ಯ ನುಡಿಗಳನ್ನು ಕಾಪಿಡಬೇಕಿದೆ. ಇದಕ್ಕಾಗಿ ತಕ್ಷಣ ಆಗಬೇಕಾದ ಕೆಲಸವೆಂದರೆ ನೂರಾರು ವಿದ್ವಾಂಸರು ರಂಗಕ್ಕಿಳಿದು, ಇಂಥ ಆಡು ಭಾಷೆಯ ಪದಗಳನ್ನು ಸಂಗ್ರಹಿಸಿ ದಾಖಲಿಸಬೇಕಿದೆ. ಈಗ ಸೂಕ್ತ ಪರ್ಯಾಯ ಪದಗಳಿಲ್ಲದೆ ಸಮಸ್ಯೆ ಎದುರಿಸುತ್ತಿರುವ ತಾಂತ್ರಿಕ ಭಾಷಾಂತರ, ವೈದ್ಯಕೀಯ ಭಾಷಾಂತರ ಕ್ಷೇತ್ರಕ್ಕೆ ಈ ಪಾರಂಪರಿಕ ಶಬ್ದ ಕೋಶವು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಭಾಷಾಂತರಕಾರರ ಕೊರತೆ
ಅಂತೆಯೇ, ಈಗ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿದೆ, ಹಣ ಇದೆ, ಅಧಿಕಾರವೂ ಇದೆ. ಆದರೆ ಸೂಕ್ತ ಭಾಷಾ ವಿದ್ವಾಂಸರ ಕೊರತೆಯಿದೆ. ಹೀಗಾಗಿ, ಪ್ರಾಚೀನ ಸಾಹಿತ್ಯದ ಭಾಷಾಂತರ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ನುಡಿದ ಅವರು, ಶಾಸ್ತ್ರೀಯ ಸ್ಥಾನಮಾನ ದೊರೆತ ಪರಿಣಾಮವಾಗಿ ತಮಿಳಿನಲ್ಲಿ ಪ್ರತಿವರ್ಷ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ 5 ಲಕ್ಷ ರೂ. ಮೊತ್ತದ ಬಹುಮಾನ ಹಾಗೂ ಯುವ ವಿದ್ವಾಂಸರಿಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದರು.

ಈ ಸ್ಥಾನ ಮಾನ ಸಿಕ್ಕ ಭಾಷೆಗಳಿಗೆ ಆಗುವ ಉಪಯೋಗವೇನೆಂಬುದನ್ನು ವಿವರಿಸಿದ ಅವರು, ಭಾಷಾ ವಿದ್ವಾಂಸರಿಗೆ ಪ್ರಶಸ್ತಿ ನೀಡಲಾಗುತ್ತದೆ, ಭಾಷಾ ಉತ್ತೇಜನ ಮಂಡಳಿಯೊಂದು ಸ್ಥಾಪಿಸಲ್ಪಟ್ಟು ಭಾಷಾ ಅಭಿವೃದ್ಧಿ ಕುರಿತಾದ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುತ್ತದೆ, ಭಾಷೆಯ ಪ್ರಗತಿಗಾಗಿ ಶ್ರಮಿಸುವ ಯುವಜನರಿಗೆ ಫೆಲೋಶಿಪ್ ನೀಡಲಾಗುತ್ತದೆ ಮತ್ತು ಶಾಸ್ತ್ರೀಯ ಭಾಷೆಗಳ ಉತ್ಕೃಷ್ಟತೆ ಕೇಂದ್ರ ಸ್ಥಾಪಿಸಲಾಗುತ್ತದೆ ಎಂದರು.

ಮದರಾಸು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಸ್.ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಹಂಪ ನಾಗರಾಜಯ್ಯ ಶಿಖರೋಪನ್ಯಾಸ ನೀಡಿದರು.

ವಿಚಾರ ಸಂಕಿರಣದ ನಿರ್ದೇಶಕಿ, ಮದರಾಸು ವಿವಿ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥೆ ಡಾ.ತಮಿಳ್ ಸೆಲ್ವಿ ಉಪಸ್ಥಿತರಿದ್ದರು. ಅತಿಥಿ ಉಪನ್ಯಾಸಕ ಪ್ರೊ.ಶ್ರೀಕೃಷ್ಣ ಭಟ್ ಅರ್ತಿಕಜೆ ಅತಿಥಿಗಳನ್ನು ಗೌರವಿಸಿದರು. ಪ್ರಶಾಂತ್ ಕುಮಾರ್ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಡಾ.ರಾಜಣ್ಣ ಸ್ವಾಗತಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಶ್ಚಿಮ ಘಟ್ಟದ ನದಿ ನೀರು ಬಳಕೆಗೆ ಕ್ರಮ
ವೈದ್ಯರ ರಾತ್ರಿ ವಾಸ್ತವ್ಯ ಕಡ್ಡಾಯ: ಶ್ರೀರಾಮುಲು
ಹಾಸನದಿಂದಲೇ ಸ್ಪರ್ಧೆ: ದೇವೇಗೌಡ
ಮಳೆ ಬೆಳೆಯಾಗಲು ಮಠಗಳಿಗೆ ಹಣ: ಸಿಎಂ ಸಮರ್ಥನೆ
ಮಹಾರಾಷ್ಟ್ರ ರಾಜಕಾರಣಿಗಳು ಉಗ್ರರು: ನಾರಾಯಣಗೌಡ
ಲೆಕ್ಕಮರುಪರಿಶೀಲನೆ: ಕೆಎಂಎಫ್ ಅರ್ಜಿ ವಜಾ