ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಮಾಡಿಯೇ ಸಿದ್ದ ಅದನ್ನು ನಾನು ಉದ್ಘಾಟಿಸುವುದನ್ನು ನೋಡಲು ಮಾಜಿ ಪ್ರಧಾನಿ ದೇವೇಗೌಡರು ಇನ್ನೂ ಎರಡು ವರ್ಷಗಳ ಕಾಲ ಬದುಕಿರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂಬ ಹೇಳಿಕೆ ನೀಡಿರುವ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರನ್ನು ಹದ್ದುಬಸ್ತಿನಲ್ಲಿಡಿ ಎಂದು ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಬಳ್ಳಾರಿ ವಿಮಾನ ನಿಲ್ದಾಣ ವಿವಾದದ ಹಿನ್ನೆಲೆಯಲ್ಲಿ ದೇವೇಗೌಡರ ಬಗ್ಗೆ ಕೀಳುಮಟ್ಟದ ಹೇಳಿಕೆಯನ್ನು ಇತ್ತೀಚೆಗೆ ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ನೀಡಿದ್ದರು.
80ವರ್ಷ ದಾಟಿದವರು ಪಾಪಿಗಳು ಎನ್ನುವುದಾದರೆ ಮಾಜಿ ಪ್ರಧಾನಿ ವಾಜಪೇಯಿ,ಲಾಲ್ ಕೃಷ್ಣ ಆಡ್ವಾಣಿ ಅವರು ಪಾಪಿಗಳು ಎಂದು ನಾವು ಹೇಳಬಹುದೇ?ಎಂದು ಗುರುವಾರ ಬಜೆಟ್ ಕುರಿತ ಚರ್ಚೆ ಸಂದರ್ಭದಲ್ಲಿ ಬಾಲಕೃಷ್ಣ ಪ್ರಶ್ನಿಸಿದರು.
ದೇವೇಗೌಡರ ಬಗ್ಗೆ ಹೇಳಿಕೆ ನೀಡುವಾಗ ಎಚ್ಚರ ವಹಿಸುವಂತೆ ರೆಡ್ಡಿ ಅವರಿಗೆ ತಾಕೀತು ಮಾಡಿ, ಇಲ್ಲದಿದ್ದರೆ ಬಿಜೆಪಿಯ ಹಿರಿಯ ನಾಯಕರ ಬಗ್ಗೆ ನಾವೂ ಅದೇ ದಾಟಿಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದರು. |