ಶಾಸಕ ಸಂಪಂಗಿ ಲಂಚ ಸ್ವೀಕಾರ ಪ್ರಕರಣದಿಂದಾಗಿ ಶಾಸಕರ ಸಮೂಹದ ಬಗ್ಗೆಯೇ ಸಂಶಯಪಡುವಂತಾಗಿದೆ, ಅಲ್ಲದೇ ಇದು ಇಡೀ ವ್ಯವಸ್ಥೆಗೆ ಕಳಂಕ ಬರುವಂತಾಗಿದೆ ಎಂದು ವಿಧಾನಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನಮಂಡಲದ ಅಧಿವೇಶನದಲ್ಲಿ ಶುಕ್ರವಾರ ಸಂಪಂಗಿ ಲಂಚ ಸ್ವೀಕಾರ ಪ್ರಕರಣದ ಕುರಿತು ಮಾತನಾಡಿದ ಸ್ಪೀಕರ್, ಸಂಪಂಗಿ ದುರ್ನಡತೆ ಬಗ್ಗೆ ಸದನ ಸಮಿತಿ ರಚಿಸುವುದಾಗಿ ತಿಳಿಸಿ, 30ದಿನದೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಉಪಸಭಾಪತಿ ಕೆ.ಜೆ.ಬೋಪಯ್ಯ ಅಧ್ಯಕ್ಷತೆಯಲ್ಲಿ ವಿಶೇಷ ಸದನ ಸಮಿತಿ ತನಿಖೆ ನಡೆಸಲಿದೆ ಎಂದರು. ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಸದನದ ಇತಿಹಾಸದಲ್ಲೇ ಪ್ರಥಮ ಘಟನೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದರಿಂದಾಗಿ ಜನಸಾಮಾನ್ಯರಲ್ಲಿ ಶಾಸಕರ ಬಗ್ಗೆ ಅಸಹ್ಯ ಮೂಡುವಂತಾಗಿದೆ ಎಂದು ಖೇದ ವ್ಯಕ್ತಪಡಿಸಿದರು. |