ನಗರದ ಹಂಪನಕಟ್ಟೆಯಲ್ಲಿರುವ ಎಮ್ನೇಶಿಯ ಪಬ್‌ನ ಪರವಾನಿಗೆಯನ್ನು ರದ್ದುಪಡಿಸಿರುವುದಾಗಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ಎಮ್ನೇಶಿಯ ಪಬ್‌ನಲ್ಲಿ ಯುವಕ-ಯುವತಿಯರು ಮಾದಕ ದ್ರವ್ಯ ಸೇವಿಸಿ ಅಶ್ಲೀಲ ನೃತ್ಯದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಕಳೆದ ತಿಂಗಳು ಶ್ರೀರಾಮಸೇನೆ ದಾಳಿ ನಡೆಸಿ, ಅಲ್ಲಿದ್ದ ಯುವಕ-ಯುವತಿಯರನ್ನು ಥಳಿಸಿತ್ತು. ಈ ಘಟನೆ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಮೂಲಕ ರಾಷ್ಟ್ರ ಮಟ್ಟದ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಘಟನೆಗೆ ಸಾರ್ವತ್ರಿಕವಾಗಿ ವಿರೋಧ ವ್ಯಕ್ತವಾಗುವ ಮೂಲಕ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಅಲ್ಲದೇ ಶ್ರೀರಾಮಸೇನೆಯ ನೈತಿಕ ಪೊಲೀಸಿಂಗ್ ಕ್ರಮಕ್ಕೆ ಮಹಿಳಾ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ವಿರೋಧ ಪಕ್ಷಗಳು ಸದನದಲ್ಲಿ ತರಾಟೆಗೆ ತೆಗೆದುಕೊಂಡಿದ್ದವು.
ಬಳಿಕ ಘಟನೆಯ ನಂತರ ಕೇಂದ್ರ ಮಹಿಳಾ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪಬ್‌ನಲ್ಲಿ ಭದ್ರತಾ ವ್ಯವಸ್ಥೆ ಇಲ್ಲ ಎಂದು ಗುಡುಗಿದ್ದರು. ಕೇಂದ್ರ ಸಚಿವೆ ರೇಣುಕಾ ಚೌಧುರಿ ಪಬ್ ಲೈಸೆನ್ಸ್ ರದ್ದುಪಡಿಸುವಂತೆ ಆಗ್ರಹಿಸಿದ್ದರು. |