ಮಂಗಳೂರು ಎಮ್ನೇಶಿಯ ಪಬ್ ಮೇಲಿನ ದಾಳಿ ಪ್ರಕರಣದ ಕುರಿತು ತನಿಖೆಯಲ್ಲಿ ಮೃದು ಧೋರಣೆ ತಾಳಿದ್ದಾರೆಂದು ಆರೋಪಿಸಿರುವ ಸರಕಾರ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶ್ ಅವರನ್ನು ವಜಾಗೊಳಿಸಿದೆ.
ಎಮ್ನೇಶಿಯ ಪಬ್ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿದ ನಂತರ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ನಿರ್ಮಲಾ ವೆಂಕಟೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಲ್ಲದೇ ಪಬ್‌ನಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅದೇ ರೀತಿ ರಾಜ್ಯ ಸರಕಾರಕ್ಕೆ ಹೊಗಳಿಕೆಯ ಸರ್ಟಿಪಿಕೇಟ್ ಕೊಟ್ಟಿದ್ದರು.
ನಿರ್ಮಲಾ ಅವರು ದಾಳಿ ಬಗ್ಗೆ ಮೃದು ಧೋರಣೆ ತಾಳಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ರೇಣುಕಾ ಚೌಧುರಿ ತರಾಟೆಗೆ ತೆಗೆದುಕೊಂಡಿದ್ದರು. ಅದಕ್ಕೆ ನಿರ್ಮಲಾ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಇಬ್ಬರ ನಡುವೆಯೂ ಜಟಾಪಟಿ ನಡೆದಿತ್ತು.
ಇದೀಗ ಪಬ್ ಮೇಲಿನ ದಾಳಿ ಪ್ರಕರಣದ ತನಿಖೆ ವಿಚಾರದಲ್ಲಿ ಸಚಿವೆ ವಿರುದ್ಧ ಉದ್ದಟತನದ ಹೇಳಿಕೆ ನೀಡಿದ್ದ ನಿರ್ಮಲಾ ವೆಂಕಟೇಶ್ ತಲೆದಂಡ ನೀಡಿದಂತಾಗಿದೆ. |