ಪಬ್ ದಾಳಿ ಪ್ರಕರಣ ನಡೆದು ತಿಂಗಳು ಕಳೆದ ನಂತರ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ನಿರ್ಮಲಾ ವೆಂಕಟೇಶ್ ಅವರನ್ನು ವಜಾಗೊಳಿಸಿದ್ದು, ಇದೀಗ ದಾಳಿಯಲ್ಲಿ ಭಾಗಿಯಾಗಿದ್ದ ಶ್ರೀರಾಮಸೇನೆಯ ಜಗದೀಶ್ ಅಮೀನ್ ಮತ್ತು ಲೋಕೇಶ್‌ಗೆ ಮೂರು ತಿಂಗಳ ಕಾಲ ತಾಲೂಕು ವ್ಯಾಪ್ತಿಯಿಂದ ಗಡಿಪಾರು ಮಾಡಿ ಮಂಗಳೂರು ಉಪವಿಭಾಗಾಧಿಕಾರಿ ನ್ಯಾಯಾಲಯ ಶುಕ್ರವಾರ ಆದೇಶ ನೀಡಿದೆ.
ನಗರದ ಎಮ್ನೇಶಿಯ ಪಬ್ ಮೇಲೆ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿದ ಪ್ರಕರಣದ ಕುರಿತಂತೆ ಪ್ರಸಾದ್ ಅತ್ತಾವರ, ಸುಭಾಷ್ ಪಡೀಲ್, ಜಗದೀಶ್ ಅಮೀನ್, ಲೋಕೆಶ್ ಹಾಗೂ ಅಶೋಕ್ ಎಂಬ ಐದು ಮಂದಿಗೆ 'ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು' ಎಂದು ಪ್ರಶ್ನಿಸಿ ಉಪವಿಭಾಗಾಧಿಕಾರಿ ಫೆ.19ರಂದು ನೋಟಿಸ್ ಜಾರಿ ಮಾಡಿದ್ದರು. ಅಲ್ಲದೇ 24ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು.
ಆದರೆ 24ರಂದು ಆರೋಪಿಗಳ ಪರ ವಕೀಲರು ಹಾಜರಾಗಿ ಸಮಯಾವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ಫೆ.27ರಂದು ವಿಚಾರಣೆ ನಿಗದಿಯಾಗಿತ್ತು. 26ರಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಪ್ರಸಾದ್ ಅತ್ತಾವರ, ಪಡೀಲ್ ಹಾಗೂ ಅಶೋಕ್ ಗಡಿಪಾರು ನೋಟಿಸ್‌ಗೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರು.
ತಡೆಯಾಜ್ಞೆ ನೀಡಿದ ಸೆಶನ್ಸ್ ನ್ಯಾಯಾಲಯ ಏ.29ರ ಮೊದಲು ಸಂಬಂಧಿಸಿದ ದಾಖಲೆ ಒದಗಿಸುವಂತೆ ಮೂವರು ಆರೋಪಿಗಳಿಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಉಳಿದ ಇಬ್ಬರ ಗಡಿಪಾರಿಗೆ ನ್ಯಾಯಾಲಯ ಆದೇಶ ನೀಡಿದೆ.
ಈ ಆದೇಶ ಫೆ.28ರಿಂದಲೇ ಜಾರಿಗೆ ಬರಲಿದ್ದು, ತಾಲೂಕು ವ್ಯಾಪ್ತಿಯಿಂದ ಅವರು ಹೊರಗಡೆ ಇರಬೇಕು. ಪೊಲೀಸ್ ಇಲಾಖೆ ಸಲ್ಲಿಸಿದ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಆದೇಶ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ದೈನಿಕವೊಂದಕ್ಕೆ ತಿಳಿಸಿದ್ದಾರೆ. |