ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಕನ್ನಡ ರಂಗಭೂಮಿಯಿ ಖ್ಯಾತ ನಟಿ, ಗಾಯಕಿ ಬಿ.ಜಯಶ್ರೀ, ಕನ್ನಡದ ಹಿರಿಯ ಕವಿ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಸುಜನಾ ಹಾಗೂ ವಿವಿ ಆಯೋಗದ ಅಧ್ಯಕ್ಷ ಪ್ರೊ.ಸುಖ್ ದೇವ್ ಥೋರಟ್ ಅವರಿಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ.
ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಮಾರ್ಚ್ 6ರಂದು ನಡೆಯಲಿರುವ 9ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಗೌರವ ಎಲ್‌ಎಲ್‌ಡಿ-ಡಿ.ಲಿಟ್ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಡಾ.ಬಿ.ಎ.ವಿವೇಕ ರೈ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯಪಾಲ ರಾಮೇಶ್ವರ ಠಾಕೂರ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು, ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅತಿಥಿಯಾಗಿ ಭಾಗವಹಿಸಲಿದ್ದು, ಖ್ಯಾತ ಇತಿಹಾಸ ಸಂಶೋಧಕ ಪ್ರೊ.ಎಸ್.ಶೆಟ್ಟರ್ ಘಟಿಕೋತ್ಸವ ಭಾಷಣ ಮಾಡುವರು ಎಂದು ವಿವರಿಸಿದರು. |