ವಿವಿಧ ಆದ್ಯತಾ ವಲಯಗಳಿಗೆ ನೀಡಿರುವ ಅನುದಾನದ ಅಂಕಿ ಅಂಶಗಳಲ್ಲಿಯೇ ಮೋಸ ಮಾಡಿ ಜನರಿಗೆ ಮತ್ತೊಮ್ಮೆ ಮಕ್ಮಲ್ ಟೋಪಿ ಹಾಕುತ್ತಿರುವ ಬಜೆಟ್ ಇದಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಬಜೆಟ್‌ನ ಮುಖ್ಯಾಂಶಗಳಲ್ಲಿ ಆದ್ಯತಾ ವಲಯಗಳಿಗೆ ನೀಡುವ ಅನುದಾನದ ಗಾತ್ರದ ಕುರಿತು ಹೇಳುವ ಅಂಕಿ-ಅಂಶಗಳಿಗೂ, ಯೋಜನಾ ಗಾತ್ರದಲ್ಲಿ ನಿಗದಿ ಮಾಡಿರುವ ಅನುದಾನಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸರಕಾರ ಯಾರನ್ನೂ ವಂಚಿಸಲು ಹೊರಟಿದೆ ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ಜನತೆಯನ್ನು ಮಾತ್ರವಲ್ಲದೆ ಸದನಕ್ಕೂ ಸಹ ದಿಕ್ಕು ತಪ್ಪಿಸುವ ಕೆಲಸವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಬಜೆಟ್‌ನಲ್ಲಿ ಹೋಲಿಕೆಗಳನ್ನು ಕಳೆದ ಸಾಲಿನ ಅಂಕಿ ಅಂಶಗಳ ಜತೆ ಮಾಡದೆ ಅದರ ಹಿಂದಿನ ವರ್ಷದ ಅಂಕಿ ಅಂಶಗಳ ಮಾಡುತ್ತಾ ಕಸರತ್ತು ನಡೆಸಿದ್ದಾರೆ ಎಂದು ದೂರಿದರು.
ಪದೇ ಪದೇ ಪ್ರತಿಪಕ್ಷಗಳಿಗೆ ಜನ ಬಡಿಗೆ ತೆಗೆದುಕೊಂಡು ಬಡಿಯುತ್ತಾರೆ ಎಂಬ ಮಾತನ್ನು ಹೇಳುತ್ತೀರಿ. ಆದರೆ ಅದೇ ಜನ ಬಡಿಗೆಯನ್ನು ನಿಮ್ಮ ಮೇಲೆ ಪ್ರಯೋಗಿಸುವ ಕಾಲ ದೂರವಿಲ್ಲವೆಂಬುದನ್ನು ಮರೆಯಬೇಡಿ ಎಂದು ಕುಮಾರಸ್ವಾಮಿ ಕಿಡಿ ಕಾರಿದರು. |