ಕೆಜಿಎಫ್ ಶಾಸಕ ಸಂಪಂಗಿ ಲಂಚಸ್ವೀಕಾರ ಪ್ರಕರಣದ ಕುರಿತು ವಿಧಾನಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಶುಕ್ರವಾರ ವಿಧಾನಸಭೆಯಲ್ಲಿ ನೀಡಿದ್ದ 'ರೂಲಿಂಗ್'ಗೆ ಲೋಕಾಯುಕ್ತರು ಕಿಡಿಕಿಡಿಯಾಗಿದ್ದಾರೆ.ನಿನ್ನೆ ವಿಧಾನಮಂಡಲದ ಅಧಿವೇಶನದಲ್ಲಿ ಸ್ಪೀಕರ್ ಜಗದೀಶ್ ಶೆಟ್ಟರ್ ಅವರು, ಸಂಪಂಗಿ ಲಂಚ ಸ್ವೀಕಾರಕ್ಕೆ ಸಂಬಂಧಿಸಿದಂತೆ, 'ಶಾಸಕರ ಭವನವೂ ವಿಧಾನಸಭೆ ಆವರಣ'ಎಂಬುದಾಗಿ ರೂಲಿಂಗ್ ನೀಡುವ ಮೂಲಕ ಹೊಸ ವ್ಯಾಖ್ಯಾನ ನೀಡಿದ್ದಲ್ಲದೇ, ಲೋಕಾಯುಕ್ತ ಅಧಿಕಾರಕ್ಕೆ ಅಂಕುಶ ಹಾಕಲು ಹೊರಟಂತಾಗಿದೆ.ಸ್ಪೀಕರ್ ಅವರು ನೀಡಿರುವ ರೂಲಿಂಗ್ ಬಗ್ಗೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಇದರಿಂದಾಗಿ ಲೋಕಾಯುಕ್ತ ತನಿಖೆಗೆ ಅಡ್ಡಿಯಾಗಲಿದೆ, ಅಲ್ಲದೇ ಇನ್ನು ಮುಂದೆ ನಾವು ಶಾಸಕರ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಸಬೇಕಿದ್ದರೂ ಸ್ಪೀಕರ್ ಅನುಮತಿ ಪಡೆಯಬೇಕಾಗುತ್ತದೆ ಎಂದು ಹೇಳಿದರು.ಸಂಪಂಗಿ ಲಂಚ ಸ್ವೀಕಾರ ಪುರಾಣದ ಬಗ್ಗೆ ಸ್ಪೀಕರ್ ಅವರು ನೀಡಿರುವ ಹೊಸ ವ್ಯಾಖ್ಯಾನಕ್ಕೆ ಪ್ರತಿಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ಹೆಚ್ಚಿಗೆ ಅಧಿಕಾರ ನೀಡಿ ಅಂತ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದ ಲೋಕಾಯುಕ್ತಕ್ಕೆ ಸರಕಾರ ಅಂಕುಶ ಹಾಕಲು ಹೊರಟಿದೆ, ಹಾಗೆಯೇ ಭ್ರಷ್ಟ ಶಾಸಕರ ರಕ್ಷಣೆಗೆ ಸ್ಪೀಕರ್ ಮುಂದಾಗಿದ್ದರೆ ಎಂಬ ಅಂಶ ಇದರಿಂದ ಸ್ಪಷ್ಟವಾಗಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |