ಬಿಜೆಪಿ ಸೇರುವ ವಿಚಾರವಾಗಿ ಇನ್ನೊಂದು ವಾರದಲ್ಲಿ ಚನ್ನಪಟ್ಟಣದ ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ನಿರ್ಧಾರ ಕೈಗೊಳ್ಳಲಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿಗೆ ಬರುವಂತೆ ಗುರುವಾರ ಆಹ್ವಾನ ನೀಡಿದ್ದಾರೆ. ಆದರೆ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧಾರ ತಿಳಿಸಲು ಒಂದು ವಾರ ಸಮಯ ಕೇಳಿರುವೆ ಎಂದು ಯೋಗೇಶ್ವರ್ ತಿಳಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ನೀರಾವರಿ ಯೋಜನೆಗಳಿಗೆ ಅನುದಾನ ಸೇರಿದಂತೆ ಕ್ಷೇತ್ರ ಅಭಿವೃದ್ದಿಗೆ ವಿಶೇಷ ಗಮನಹರಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಗೆ ಸೇರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ ನನಗಿಲ್ಲ. ಕ್ಷೇತ್ರದ ಅಭಿವೃದ್ದಿಯೊಂದೇ ಪ್ರಮುಖವಾಗಿದ್ದು, ಕ್ಷೇತ್ರದಲ್ಲಿ ನನ್ನ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೆ. ಪಕ್ಷ ತ್ಯಜಿಸುತ್ತೇನೆ ಎಂದು ತಿಳಿದ ಮೇಲೆ ಮುಖಂಡರು ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಯೋಗೇಶ್ವರ್ ತಿಳಿಸಿದ್ದಾರೆ. |