ಶಿರಾಡಿ ಘಾಟ್ ರಸ್ತೆ ಸಾಕಷ್ಟು ಹಾಳಾಗಿರುವುದು ಗಮನಕ್ಕೆ ಬಂದಿದೆ. ಈ ರಸ್ತೆಯಲ್ಲಿ ಅತಿ ಭಾರ ಹೊತ್ತ ವಾಹನಗಳು ಸಂಚರಿಸದಂತೆ ಕ್ರಮ ಕೈಗೊಳ್ಳುವುದು ರಾಜ್ಯ ಸರಕಾರದ ಕರ್ತವ್ಯ ಎಂದ ಹೆದ್ದಾರಿ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಇಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾಡಿ ಘಾಟ್‌ನಲ್ಲಿ ಅದಿರು ಲಾರಿ ಸಂಚಾರ ತಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆ ನಿಟ್ಟಿನಲ್ಲಿ 23ಕಿ.ಮಿ.ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಮುನಿಯಪ್ಪ ಹೇಳಿದರು.
ಅಲ್ಲದೇ ಮಂಗಳೂರಿನಿಂದ ತಮಿಳುನಾಡಿನ ವಿಲ್ಲುಪುರಂ ನಡುವಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲಾಗಿದೆ. ಇದರಿಂದ ಪಶ್ಚಿಮ ಮತ್ತು ಪೂರ್ವ ಕಡಲ ತೀರದ ಬಂದರುಗಳ ನಡುವಿನ ಸಂಚಾರ ಸುಗಮವಾಗಲಿದೆ ಎಂದು ವಿವರಿಸಿದರು.
ಒಟ್ಟು 714ಕಿ.ಮೀ.ಉದ್ದದ ರಸ್ತೆಯಲ್ಲಿ 534ಕಿ.ಮೀ.ಉದ್ದದ ರಸ್ತೆ ರಾಜ್ಯಕ್ಕೆ ಸೇರಿದೆ. ಮಂಗಳೂರಿನಿಂದ ಬೆಳ್ತಂಗಡಿ, ಮೂಡಿಗೆರೆ, ಬೇಲೂರು, ಹುಳಿಯಾರು, ಶಿರಾ,ಮಧುಗಿರಿ, ಚಿಂತಾಮಣಿ ಹಾಗೂ ಆಂಧ್ರಪ್ರದೇಶದ ವೆಂಕಟಗಿರಿ, ಕೋಟ, ತಮಿಳುನಾಡಿನ ಪೆರ್ನಾಂಪೇಟೆ, ಗುಡಿಯಾಟ್ಟಂ, ಕಾಟ್ಪಾಡಿ, ವೆಲ್ಲರೂ, ಪುಷ್ಪಗಿರಿ, ಪೋಲಾರ್,ತಿರುವಣ್ಣಾಮಲೈ ಮಾರ್ಗವಾಗಿ ವಿಲ್ಲುಪುರಂವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುವುದು ಎಂದರು. |