ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಆರಂಭಕ್ಕೆ ಭಾನುವಾರ ಕ್ಷಣಗಣನೆ ಪ್ರಾರಂಭವಾಗುತ್ತಿದ್ದಂತೆ ಅರಮನೆ ಮೈದಾನ ಸಕಲ ರೀತಿಯಲ್ಲಿಯೂ ಸಜ್ಜುಗೊಂಡಿದೆ.
ಅರಮನೆ ಮೈದಾನದಲ್ಲಿ ಇಂದು ನಡೆಯುವ ಅದ್ದೂರಿ ಕಾರ್ಯಕ್ರಮಕ್ಕೆ 1 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ಇಡೀ ಚಿತ್ರರಂಗ ಒಂದೇ ವೇದಿಕೆಯಲ್ಲಿ ಮೇಲೆ ಕಾಣಿಸಿಕೊಳ್ಳುತ್ತಿರುವುದು ಇಲ್ಲಿನ ವಿಶೇಷ. ಸಮಾರಂಭಕ್ಕಾಗಿಯೇ ಸುಮಾರು 160/120 ಅಡಿಯ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಈ ವೇದಿಕೆಯ ಪರಿಕಲ್ಪನೆ ಚಿತ್ರನಟ ರವಿಚಂದ್ರನ್ ಅವರದು. ಅಲ್ಲದೆ, ತಾರೆಯರೆಲ್ಲ ಒಂದೇ ವೇದಿಕೆ ಮೇಲೆ ರವಿಚಂದ್ರನ್ ನೃತ್ಯ ನಿರ್ದೇಶನದಲ್ಲಿ ನರ್ತಿಸಲಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ.
ಈ ಸುವರ್ಣ ಸಂಜೆಯ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಉದ್ಘಾಟನೆ ಮಾಡಲಿದ್ದಾರೆ. ರಜನಿಕಾಂತ್ ಮತ್ತು ಕಮಲಹಾಸನ್ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ತೆಲುಗು ಚಿತ್ರರಂಗದ ದಿಗ್ಗಜರಾದ ಡಿ. ರಾಮಾನಾಯ್ಡು, ಅಶ್ವಿನಿ ದತ್, ಹಿನ್ನೆಲೆ ಗಾಯಕ ಪಿ.ಬಿ. ಶ್ರೀನಿವಾಸ್, ಗಾಯಕಿ ಎಸ್, ಜಾನಕಿ, ಎಸ್.ಪಿ. ಬಾಲಸುಬ್ರಮಣ್ಯಂ, ಪ್ರಕಾಶ್ ರೈ, ಅರ್ಜುನ್ ಸರ್ಜಾ ಸೇರಿದಂತೆ ಹಲವು ನಾಯಕ ನಾಯಕಿಯರು ಸಮಾರಂಭಕ್ಕೆ ಆಗಮಿಸಲಿದ್ದಾರೆ.
ಇಂದಿನ ಕಾರ್ಯಕ್ರಮವನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. ಒಂದೊಂದು ಹಂತಕ್ಕೆ 45 ನಿಮಿಷ ಅವಧಿ. ಅದಾಗಿ 15 ನಿಮಿಷಗಳ ಕಾಲ ವಿರಾಮವಿರುತ್ತದೆ. ಕಾರ್ಯಕ್ರಮದ ಮೊದಲ ಹಂತ ಹಾಡಿನೊಂದಿಗೆ ಪ್ರಾರಂಭವಾಗುತ್ತದೆ. ಮುಕ್ತಾಯ ಕೂಡ ಹಾಡಿನ ಗುಚ್ಛದೊಂದಿಗೆ ಆಗಲಿದೆ. ಅಲ್ಲದೆ, ಮುಕ್ತಾಯ ಹಂತದ ವಿಶೇಷವೆಂದರೆ 1934ರಿಂದ 2009ರವರೆಗಿನ 75 ವರ್ಷಗಳ ಜನಪ್ರಿಯ ಹಾಡುಗಳಲ್ಲಿ ಇಲ್ಲಿ ಪ್ರಸ್ತುತಪಡಿಸಲಾಗುತ್ತದೆ. |