2014ರ ವೇಳೆಗೆ 10ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸೃಷ್ಟಿ ಹಾಗೂ ರಾಜ್ಯದ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲನ್ನು ಶೇ.20ಕ್ಕೆ ಹೆಚ್ಚಿಸುವ ಆಶಯದ ನೂತನ ಕೈಗಾರಿಗೆ ನೀತಿಗೆ ಸಚಿವ ಸಂಪುಟ ಶನಿವಾರ ಅನುಮೋದನೆ ನೀಡಿದೆ.
ಇದೇ ವರ್ಷದ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ನೂತನ ಕೈಗಾರಿಕಾ ನೀತಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ 3ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಹೊಂದಿದ್ದು, ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ಪರಿಸರ ಕಲ್ಪಿಸುವ ಆಶಯ ಹೊಂದಲಾಗಿದೆ ಎಂದು ಸಭೆಯ ಬಳಿಕ ಗ್ರಾಮೀಣಾಭಿವೃದ್ದಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಡಾ| ಡಿ.ಎಂ. ನಂಜುಂಡಪ್ಪ ಸಮಿತಿಯ ಶಿಫಾರಸಿನಂತೆ ರಾಜ್ಯವನ್ನು 4 ವಲಯಗಳಾಗಿ ವರ್ಗೀಕರಿಸಿ, ಖಾಸಗಿ ಸಹಭಾಗಿತ್ವದಲ್ಲಿ ಕೈಗಾರಿಕಾ ಮೂಲ ಸೌಕರ್ಯ ಅಭಿವೃದ್ದಿಪಡಿಸುವುದು, ಸುವರ್ಣ ಕರ್ನಾಟಕ ಅಭಿವೃದ್ದಿ ಕಾರಿಡಾರ್ ಯೋಜನೆಯಡಿ ರಾಜ್ಯದ ಉದ್ದಗಲಕ್ಕೂ ಅಷ್ಟ ಪಥದ 4 ರಸ್ತೆಗಳ ನಿರ್ಮಾಣ, ನಿರ್ದಿಷ್ಟ ಉತ್ಪನ್ನ ಆಧಾರಿತ ವಲಯಗಳ ಸ್ಥಾಪನೆ ಹಾಗೂ ರೈತರಿಗೆ ಉತ್ತಮ ಪರಿಹಾರ ಸೌಲಭ್ಯಗಳು ಸೇರಿದಂತೆ ಹಲವು ಯೋಜನೆಗಳಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.
ಭೂ ಮಾಲೀಕರ ಸಂಪೂರ್ಣ ಸಮ್ಮತಿ ಆಧರಿಸಿ ಮಾತ್ರ ಭೂಮಿ ಸ್ವಾಧೀನಕ್ಕೆ ಅವಕಾಶ ಕಲ್ಪಿಸುವ, ರೈತ ಸ್ನೇಹಿಯಾದ ನೂತನ ರಾಜ್ಯ ಎಸ್ಇಝಡ್ ನೀತಿಗೆ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. |