ನಗರದ ಎಮ್ನೇಶಿಯ ಪಬ್ ಮೇಲೆ ದಾಳಿ ನಡೆಸಿದ ಪ್ರಕರಣದ ಕುರಿತಂತೆ ಶ್ರೀರಾಮಸೇನೆಯ ಇಬ್ಬರನ್ನು ಗಡಿಪಾರು ಮಾಡಿರುವ ಕ್ರಮದ ವಿರುದ್ಧ ಕಿಡಿಕಾರಿರುವ ಮುತಾಲಿಕ್ ಹತ್ತು ಸಾವಿರ ಕಾರ್ಯಕರ್ತರೊಂದಿಗೆ ಮಂಗಳೂರಿಗೆ ಆಗಮಿಸುತ್ತೇನೆ ತಾಕತ್ತಿದ್ದರೆ ತಡೆಯಿರಿ ಎಂದು ಜಿಲ್ಲಾಡಳಿತಕ್ಕೆ ಸವಾಲ್ ಹಾಕಿದ್ದಾರೆ.ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಿಂದೂತ್ವ ಮರೆತು ಕಾರ್ಯನಿರ್ವಹಿಸುತ್ತಿದೆ ಎಂದ ಅವರು, ಬಿಜೆಪಿ ಅಧಿಕಾರದ ಅಮಲಿನಲ್ಲಿ ರಾಜ್ಯಭಾರ ಮಾಡುತ್ತಿರುವುದಾಗಿ ಗಂಭೀರವಾಗಿ ಆರೋಪಿಸಿದರು. ಇದಕ್ಕೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಪಬ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಸೇರಿದಂತೆ ಐದು ಮಂದಿಗೆ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿತ್ತು. ಆದರೆ ಮೂರು ಮಂದಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಏತನ್ಮಧ್ಯೆ ಜಿಲ್ಲಾಡಳಿತ ಉಳಿದಿಬ್ಬರನ್ನು ಗಡಿಪಾರು ಮಾಡಿತ್ತು.ಜಿಲ್ಲಾಡಳಿತದ ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶ್ರೀರಾಮಸೇನೆಯ ಸಂಸ್ಥಾಪಕ ಮುತಾಲಿಕ್, ನಗರಕ್ಕೆ ಹತ್ತು ಸಾವಿರ ಮಂದಿ ಕಾರ್ಯಕರ್ತರೊಂದಿಗೆ ಆಗಮಿಸುವುದಾಗಿ ಸವಾಲ್ ಹಾಕಿದ್ದಾರೆ. |