ಶಿವಾಜಿನಗರದ ಟ್ರಾವೆಲ್ ಏಜೆಂಟ್ ಹಾಗೂ ಅವರ ಪತ್ನಿಯನ್ನು ಮನೆಯೊಳಗೆ ನುಗ್ಗಿ ರಿವಾಲ್ವರ್‌ನಿಂದ ಗುಂಡಿಟ್ಟು ಕೊಲೆ ಮಾಡಿದ ಘಟನೆ ನಗರದ ಮನೆಯೊಂದರಲ್ಲಿ ನಡೆದಿದೆ.
ವಿವೇಕಾನಂದನಗರ ನಿವಾಸಿ ಜಾವೆದ್(40) ಹಾಗೂ ಪತ್ನಿ ಹಾಜಿರಾ (35)ಕೊಲೆಯಾದವರು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಕೊಲೆ ಮಾಡಲು ಬಳಸಿದ ರಿವಾಲ್ವರ್ ಹಾಗೂ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಕೊಲೆ ನಡೆದ ಕೆಲಗಂಟೆಗಳ ನಂತರ ಮೂವರು ವ್ಯಕ್ತಿಗಳು ಕೊಲ್ಕತಾಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಕ್ಕಳು ಅಳುತ್ತಿದ್ದುದನ್ನು ನೋಡಿದ ಅಕ್ಕಪಕ್ಕದವರು ಮನೆ ಬಾಗಿಲು ತೆರೆದು ನೋಡಿದಾಗ ಇಬ್ಬರ ದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂತು. ಇಬ್ಬರ ಎದೆಗೆ ಗುಂಡೇಟು ಬಿದ್ದಿದ್ದು ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಕ್ಕಪಕ್ಕದ ನಿವಾಸಿಗಳು ದಿಗ್ಬ್ರಾಂತರಾದರು. ಮನೆಯೊಳಗೇ ನುಗ್ಗಿ ದಂಪತಿಯನ್ನು ಕೊಲೆ ಮಾಡಿರುವುದು ಸ್ಥಳೀಯರನ್ನು ಬೆಚ್ಚಿ ಬೀಳುವಂತೆ ಮಾಡಿದೆ. |