ನಗರದ ಎಮ್ನೇಶಿಯ ಪಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ವಜಾ ಮಾಡಿರುವ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ನಿರ್ಮಲಾ ವೆಂಕಟೇಶ್ ಆರೋಪಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಬ್ ದಾಳಿಯ ನಂತರ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಿದ್ದರೂ ಕೂಡ, ಕೇಂದ್ರದ ಯುಪಿಎ ಸರಕಾರ ವರದಿಯನ್ನು ತಿರಸ್ಕರಿಸಿದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ತನ್ನ ವರದಿಯನ್ನು ತಿರಸ್ಕರಿಸಿರುವ ಹಿಂದೆ ರಾಜಕೀಯ ಸಂಚು ಅಡಗಿದೆ ಎಂದು ದೂರಿರುವ ಅವರು, ಕೇಂದ್ರದ ಕ್ರಮದ ವಿರುದ್ಧ ಸರ್ವೋಚ್ಚನ್ಯಾಯಾಲಯದ ಮೆಟ್ಟಿಲೇರುವುದಾಗಿ ಗುಡುಗಿದ್ದಾರೆ.
ತಮ್ಮ ಮಾತಿನುದ್ದಕ್ಕೂ ಯುಪಿಎ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಿರ್ಮಲಾ, ಕಾಂಗ್ರೆಸ್ ತನ್ನನ್ನು ವ್ಯವಸ್ಥಿತವಾಗಿ ತುಳಿಯುತ್ತಿದೆ ಎಂದರು.
ಎಮ್ನೇಶಿಯಾ ಪಬ್ ಮೇಲೆ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿದ ಬಳಿಕ, ನಿರ್ಮಲಾ ವೆಂಕಟೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಆದರೆ ವರದಿ ಸಮರ್ಪಕವಾಗಿಲ್ಲ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವೆ ರೇಣುಕಾ ಚೌಧುರಿ ಅವರು ಆಕ್ಷೇಪ ವ್ಯಕ್ತಪಡಿಸಿ ತಿರಸ್ಕರಿಸಿದ್ದರು.
ತದನಂತರ ನಿರ್ಮಲಾ ವೆಂಕಟೇಶ್ ಹಾಗೂ ಸಚಿವೆ ರೇಣುಕಾ ಚೌಧುರಿ ನಡುವೆ ಮಾತಿನ ಸಮರ ನಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ನಿರ್ಮಲಾ ವೆಂಕಟೇಶ್ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯತ್ವದಿಂದ ಶನಿವಾರ ವಜಾಗೊಳಿಸಿತ್ತು. |