ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಎನ್‌ಎಸ್‌ಜಿ ಕಮಾಂಡರ್ ಮೇ.ಸಂದೀಪ್ ಉನ್ನಿಕೃಷ್ಣನ್ ಅವರ ಸ್ಮರಣಾರ್ಥ ಕರ್ನಾಟಕ ಸರಕಾರ ಯಲಹಂಕದ ರಸ್ತೆಗೆ ಅವರ ಹೆಸರನ್ನು ಇಡುವುದಾಗಿ ತಿಳಿಸಿದೆ.
ಸುಮಾರು 200ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಯಲಹಂಕ ಉಪನಗರ ರಸ್ತೆಗೆ ದಿ.ಮೇಜರ್ ಉನ್ನಿಕೃಷ್ಣನ್ ಅವರ ಹೆಸರನ್ನು ಇಡುವುದಾಗಿ ಅಭಿವೃದ್ದಿ ಕಾಮಗಾರಿಯ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಕಳೆದ ವರ್ಷ ಮುಂಬೈಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಸಂದರ್ಭದಲ್ಲಿ ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದ ಮೇಜರ್ ಸಂದೀಪ್ ಅವರ ಕುಟುಂಬಕ್ಕೆ ರಾಜ್ಯ ಸರಕಾರ 30ಲಕ್ಷ ರೂಪಾಯಿ ಪರಿಹಾರ ನೀಡಿದೆ. |