ಲೋಕಸಭಾ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಿಸಿದ ಬೆನ್ನಲ್ಲೇ, ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರ್ಯಾಯವಾಗಿ ಮಾರ್ಚ್ 12ರಂದು ಎಡಪಕ್ಷ ಸೇರಿದಂತೆ ಎಂಟು ಪಕ್ಷಗಳ ಮೈತ್ರಿಯೊಂದಿಗೆ ತೃತೀಯ ರಂಗಕ್ಕೆ ಚಾಲನೆ ನೀಡಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಘೋಷಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 12ರಂದು ತುಮಕೂರಿನಲ್ಲಿ ನಡೆಯಲಿರುವ ಬೃಹತ್ ರಾಲಿಯಲ್ಲಿ ತೃತೀಯ ರಂಗಕ್ಕೆ ಚಾಲನೆ ನೀಡಲಾಗುವುದು ಎಂದರು.
ಸಿಪಿಎಂ, ಸಿಪಿಐ, ಫಾರ್ವರ್ಡ್ ಬ್ಲಾಕ್, ಆರ್‌ಪಿಐ, ಟಿಡಿಪಿ, ಟಿಆರ್‌ಎಸ್, ಎಐಎಡಿಎಂಕೆ ಮತ್ತು ಜೆಡಿಎಸ್ ಸೇರಿದಂತೆ ಎಂಟು ಪಕ್ಷಗಳು ತೃತೀಯ ರಂಗ ರಚನೆಗೆ ಒಪ್ಪಿಗೆ ಸೂಚಿಸಿದ್ದು, ತುಮಕೂರಿನಲ್ಲಿ ನಡೆಯಲಿರುವ ರಾಲಿಯಲ್ಲಿ ಅವು ಭಾಗವಹಿಸಲಿವೆ ಎಂದು ಗೌಡರು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಡ್ಡು ಹೊಡೆಯುವ ನೆಲೆಯಲ್ಲಿ ತೃತೀಯ ರಂಗದ ರಚನೆಯನ್ನು ಮುನ್ನೆಡೆಸುವ ಹೊಣೆ ಗೌಡರ ಹೆಗಲೇರಿದೆ.
ಆದರೆ ತೃತೀಯ ರಂಗದದಿಂದ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರೆಂಬ ಬಗ್ಗೆ ಚರ್ಚೆಯಾಗಿಲ್ಲ, ಅಥವಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರನ್ನೇ ಪ್ರಧಾನಮಂತ್ರಿ ಹುದ್ದೆಗಾದಿಗೆ ಬೆಂಬಲ ನೀಡಬೇಕೆಂಬ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಯಬೇಕು ಎಂದು ದೇವೇಗೌಡರು ಹೇಳಿದರು. |