ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ಎರಡನೇ ದಿನವಾದ ಸೋಮವಾರ ಸೂಪರ್ ಸ್ವಾರ್ ರಜನಿಕಾಂತ್ ಹಾಗೂ ಪ್ರಕಾಶ್ ರೈ ಭಾಗವಹಿಸುವ ಮೂಲಕ ಅಮೃತ ಮಹೋತ್ಸವದ ಮೆರುಗನ್ನು ಹೆಚ್ಚಿಸಿದರು.ಕನ್ನಡ ಅಭಿಮಾನಿಗಳನ್ನು ಉದ್ದೇಶಿಸಿ ಅಚ್ಚ ಕನ್ನಡದಲ್ಲೇ ಮಾತನಾಡಿದ ರಜನಿಕಾಂತ್, ಕನ್ನಡದಲ್ಲಿ ಮತ್ತೆ ನಟಿಸುವ ಆಸೆ ಇದೆ. ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದೇನೆ. ದಳವಾಯಿ ಮತ್ತಣ್ಣನಂಥ ಪಾತ್ರದಲ್ಲಿ ನಟಿಸುವ ಆಸೆಯಿದೆ. ಅವಕಾಶ ಸಿಕ್ಕರೆ ಖಂಡಿತವಾಗಿ ನಟಿಸುತ್ತೇನೆ ಎಂದು ಹೇಳುವ ಮೂಲಕ ಅವರ ಕನ್ನಡಾಭಿಮಾನಿಗಳ ಮನದಾಳದಲ್ಲಿ ಕುತೂಹಲ ಮೂಡಿಸಿದರು. ಸಿನಿಮಾದಲ್ಲಿ ರಾಜಕೀಯ ಬೆರೆಸಿ ಈ ಕ್ಷೇತ್ರವನ್ನು ಕೊಳಕು ಮಾಡುವುದು ಬೇಡ. ತಮಿಳರು ಹಾಗೂ ಕನ್ನಡಿಗರು ಸೋದರರು ಎಂದರು. ಹಿಂದೆ ಉತ್ತಮ ಕಾದಂಬರಿಗಳನ್ನು ಆಧರಿಸಿದ ಚಿತ್ರಗಳು ಬರುತ್ತಿದ್ದವು. ಆದರೆ ಈಗ ಕಾದಂಬರಿ ಆಧರಿತ ಚಿತ್ರಗಳು ಕಡಿಮೆಯಾಗುತ್ತಿವೆ. ಪುಟ್ಟಣ ಕಣಗಲ್ ಸೇರಿದಂತೆ ಅನೇಕರು ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡುತ್ತಿದ್ದರು. ಇಂದಿನ ಯುವ ಪೀಳಿಗೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಯುವ ಜನಾಂಗ ಹೆಚ್ಚು ಹೆಚ್ಚು ಸಾಹಿತ್ಯವನ್ನು ಓದಬೇಕು ಎಂದರು.ಕನ್ನಡದ ವರನಟ ಡಾ. ರಾಜ್ ಅವರನ್ನು ನೆನಪಿಸಿಕೊಂಡ ರಜನಿಕಾಂತ್, ನಾನು ರಾಜ್ ಅವರನ್ನು ತುಂಬಾ ಮಿಸ್ ಮಾಡ್ಕೋತ್ತಿದ್ದೀನಿ. ಅವರ ಅನೇಕ ಚಿತ್ರಗಳು ನನ್ನಲ್ಲಿ ಭಕ್ತಿರಸವನ್ನು ಸೃಷ್ಟಿಸಿವೆ ಎಂದು ರಾಜ್ ಅವರನ್ನು ಸ್ಮರಿಸಿಕೊಂಡರು.ಮತ್ತೊಬ್ಬ ಖ್ಯಾತ ನಟ ಪ್ರಕಾಶ್ ರಾಜ್ ಮಾತನಾಡಿ ಇದೊಂದು ಕನ್ನಡ ಹೆಮ್ಮೆಯ ಕಾರ್ಯಕ್ರಮ. ರಾಜ್ ಇಲ್ಲದಿರುವುದು ಬೇಸರದ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ಸಾಧಕರನ್ನು ಸನ್ಮಾನಿಸಲಾಯಿತು. |