ಸಂಸದೆ ತೇಜಸ್ವಿನಿ ಗೌಡ ತಾವಾಗಿಯೇ ಟಿಕೆಟ್ ತಪ್ಪಿಸಿಕೊಂಡಿದ್ದಾರೆಯೇ ವಿನಃ ಅವರಿಗೆ ಟಿಕೆಟ್ ತಪ್ಪಿಸಲು ಯಾರೂ ಪ್ರಯತ್ನಿಸಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ತೇಜಸ್ವಿನಿ ಅವರಿಗೆ ಟಿಕೆಟ್ ನೀಡಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬ್ಲಾಕ್ ಸಮಿತಿಗಳಿಂದಲೇ ವಿರೋಧವಿದೆ. ಅದಕ್ಕಿಂತ ಮುಖ್ಯವಾಗಿ ಅವರ ವರ್ತನೆ ಟಿಕೆಟ್ ತಪ್ಪಿಸಲು ಕಾರಣ. ರಾಜ್ಯದ ಉಸ್ತುವಾರಿ ವಹಿಸಿಕೊಂಡ ಬಳಿಕ ಮೊದಲ ಭೇಟಿ ನೀಡಿದ ಗುಲಾಂ ನಬಿ ಆಜಾದ್ ಸ್ವಾಗತಕ್ಕೆ ಪಕ್ಷದ ಮುಖಂಡರೆಲ್ಲ ತೆರಳಿದ್ದರೆ, ತೇಜಸ್ವಿನಿ ಮಾತ್ರ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಭೇಟಿಗೆ ಹೋಗಿದ್ದರು ಎಂದು ಡಿಕೆಶಿ ಹೇಳಿದರು.
ಶಿವಕುಮಾರ್ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂಬ ಅಂಶದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ತೇಜಸ್ವಿನಿ ಎಂಬ ಬೀಜ ಬಿತ್ತಿ ಬೆಳೆಸಿದವರೇ ಡಿ.ಕೆ.ಶಿವಕುಮಾರ್ ಎಂದು ಐದು ವರ್ಷ ಹಿಂದೆ ಇದೇ ತೇಜಸ್ವಿನಿ ಹೇಳುತ್ತಿದ್ದರು. ಆಗ ತಾವು ಹೇಳುತ್ತಿದ್ದುದನ್ನು ಅವರೊಮ್ಮೆ ರಿವೈಂಡ್ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. |