ಮುಂದಿನ ಶೈಕ್ಷಣಿಕ ವರ್ಷದಿಂದ 7ನೇ ತರಗತಿಯವರೆಗಿನ ಎಲ್ಲ ಮಕ್ಕಳಿಗೂ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಸಾರಿಗೆ ಸಚಿವ ಆರ್.ಅಶೋಕ್ ಘೋಷಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದೊಮ್ಮಲೂರಿನಲ್ಲಿ ಏರ್ಪಡಿಸಿದ್ದ ಸಂಚಾರ ಮತ್ತು ಸಾಗಣೆ ನಿರ್ಮಾಣ ಕೇಂದ್ರದ ಶಂಕುಸ್ಥಾಪನೆ ಸಮಾಂಭದಲ್ಲಿ ಈ ವಿಷಯ ತಿಳಿಸಿದ ಅವರು, 10ನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಬಸ್ ಪಾಸ್ ದರದಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲಾಗುವುದು ಎಂದರು.
ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೆ ಕ್ರಮಕೈಗೊಳ್ಳಲಾಗುವುದು. ಈಗಾಗಲೇ 4ಸಾವಿರ ಸಿಬ್ಬಂದಿ ನೇಮಕವಾಗಿದ್ದು, ಇನ್ನೂ 3ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೈಟೆಕ್ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಜನರಿಗೆ ಗುಣಮಟ್ಟದ ಸೇವೆ, ಸೌಲಭ್ಯಗಳನ್ನು ನೀಡಬೇಕು. ಸ್ವಚ್ಚತೆಯನ್ನು ಕಾಪಾಡಬೇಕು ಎಂಬುದು ನಮ್ಮ ಉದ್ದೇಶ. ನಾಗರಿಕ ಸ್ನೇಹಿಯಾದ ಬಸ್‌ಗಳ ವ್ಯವಸ್ಥೆಯನ್ನು ಸಹ ಮಾಡಲಿದ್ದೇವೆ ಎಂದರು. |