ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣದ ಬಗ್ಗೆ ಕಿಡಿಕಾರುತ್ತಿದ್ದ ಭಾಜಪಕ್ಕೆ ಇದೀಗ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಕರ್ನಾಟಕದಲ್ಲಿನ ಕುಟುಂಬ ರಾಜಕಾರಣ ಬಿಜೆಪಿಗೂ ತಲೆನೋವಾಗಿ ಪರಿಣಮಿಸಿದೆ.
ಸ್ಥಳೀಯ ರಾಜಕಾರಣಿಗಳ ರಕ್ತ ಸಂಬಂಧಿಗಳಿಗೆ ಟಿಕೆಟ್ ನೀಡಬೇಕೆಂದು ಹೆಚ್ಚುತ್ತಿರುವ ಭಾರೀ ಒತ್ತಡದಿಂದಾಗಿ ರಾಜ್ಯದ 19 ಕ್ಷೇತ್ರಗಳ ಅಭ್ಯರ್ಥಿಗಳ ಯಾದಿ ಪ್ರಕಟಣೆ ಮಾಡುವಲ್ಲಿ ಬಿಜೆಪಿ ಹೈಕಮಾಂಡ್ ವಿಳಂಬ ತಂತ್ರ ಅನುಸರಿಸುತ್ತಿದೆ.
ಇದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕುಟುಂಬ ಪ್ರಾಶಸ್ತ್ಯ ಪಡೆದಿದೆ. ಕುಟುಂಬ ರಾಜಕಾರಣಕ್ಕೆ ಮಣೆ ಹಾಕದ ತನ್ನ ತತ್ವದಂತೆ, ಶಿವಮೊಗ್ಗ ಕ್ಷೇತ್ರದಿಂದ ಮುಖ್ಯಮಂತ್ರಿ ಬಿಎಸ್‌ವೈ ಪುತ್ರ ರಾಘವೇಂದ್ರ ಇಲ್ಲವೇ ಇತರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದಲ್ಲಿ ಪಕ್ಷದಲ್ಲಿ ಹೊಯ್ದಾಟ ಆರಂಭವಾಗಿದೆ.
ಪಟ್ಟಿಯಲ್ಲಿ ರಾಘವೇಂದ್ರ ಒಬ್ಬರದ್ದೇ ಹೆಸರಾಗಿದ್ದರೆ ಪಕ್ಷಕ್ಕೆ ಅದೊಂದು ಸಮಸ್ಯೆಯಾಗುತ್ತಿರಲಿಲ್ಲ. ಹಾವೇರಿ ಕ್ಷೇತ್ರದಿಂದ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿಯವರ ಪುತ್ರ ಶಿವಕುಮಾರ್ ಸಿ. ಉದಾಸಿ, ಚಿಕ್ಕೋಡಿ ಕ್ಷೇತ್ರದಿಂದ ಸಚಿವ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಹೆಸರು ಗಣನೆಯಲ್ಲಿದೆ.
ಬಳ್ಳಾರಿ ಮೀಸಲು ಕ್ಷೇತ್ರದಿಂದ ಶ್ರೀರಾಮುಲು ಸ್ಪರ್ಧಿಸುವಂತೆ ಒತ್ತಡ ಬಂದಿದೆ. ಆದರೆ ಶ್ರೀರಾಮುಲು ಮಾತ್ರ ತಮ್ಮ ಸಹೋದರಿ ಪಾರ್ವತಮ್ಮ ಅಥವಾ ಪತ್ನಿ ಮಹಾಲಕ್ಷ್ಮಿಯ ಹೆಸರನ್ನು ಅವರು ಪ್ರಸ್ತಾಪಿಸುತ್ತಿದ್ದಾರೆ. ಹೀಗೆ ಬಿಜೆಪಿಯಲ್ಲೂ ಕುಟುಂಬ ರಾಜಕಾರಣದ ಅಲೆ ಎದ್ದಿದೆ. |