ಪಬ್ ದಾಳಿಯ ಕುರಿತು ನೀಡಿರುವ ವರದಿಯ ಜಟಾಪಟಿಯಲ್ಲಿ ತಲೆದಂಡ ತೆತ್ತಿರುವ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ನಿರ್ಮಲಾ ವೆಂಕಟೇಶ್ ಅವರು ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಯಾಗುವುದನ್ನು ಖಚಿತಪಡಿಸಿದ್ದಾರೆ.
ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ ಅವರನ್ನು ಅಧಿಕೃತವಾಗಿ ಭೇಟಿಯಾಗಿ ಮಾತುಕತೆ ನಡೆಸಿದ ನಿರ್ಮಲಾ ವೆಂಕಟೇಶ್ ಅವರು, ತಾನು ಗುರುವಾರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.
ಎಮ್ನೇಶಿಯಾ ಪಬ್ ಮೇಲೆ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿದ ಬಳಿಕ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದ ನಿರ್ಮಲಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಆದರೆ ವರದಿ ಸಮರ್ಪಕವಾಗಿಲ್ಲ ಎಂದು ಕೇಂದ್ರ ಸಚಿವೆ ರೇಣುಕಾ ಚೌಧುರಿ ಅವರು ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ಇಬ್ಬರ ನಡುವೆ ವಾಗ್ದಾಳಿ ನಡೆದಿತ್ತು.
ಇದೀಗ ದಾಳಿ ನಡೆದು ತಿಂಗಳ ಬಳಿಕ ಕೊನೆಗೂ ನಿರ್ಮಲಾ ವೆಂಕಟೇಶ್ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯತ್ವದಿಂದ ಕೇಂದ್ರ ವಜಾಗೊಳಿಸಿತ್ತು.
ಕೇಂದ್ರದ ಯುಪಿಎ ಸರಕಾರದ ನಿರ್ಧಾರ ಬಗ್ಗೆ ನಿರ್ಮಲಾ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿ, ತಾನು ನೀಡಿರುವ ವರದಿಯನ್ನು ತಿರಸ್ಕರಿಸಿರುವ ಕ್ರಮದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಸೋಮವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದರು. ಅಲ್ಲದೇ ತನ್ನ ಮುಂದಿನ ನಿರ್ಧಾರವನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸುವುದಾಗಿ ಹೇಳಿದ್ದರು.
ಕಾಂಗ್ರೆಸ್ಸಿಗ ಬಸವರಾಜ್ ಬಿಜೆಪಿಗೆ: ತುಮಕೂರು ಕ್ಷೇತ್ರದ ಮಾಜಿ ಸಂಸದ ಕಾಂಗ್ರೆಸ್ಸಿನ ಜಿ.ಎಸ್.ಬಸವರಾಜ್ ಅವರು ಇಂದು ಸದಾನಂದ ಗೌಡ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್‌ನ ಹಿರಿಯ ರಾಜಕಾರಣಿಯಾಗಿದ್ದ ಬಸವರಾಜ್ ಅವರು ಬಿಜೆಪಿ ವಿರೋಧಿ ನಿಲುವನ್ನು ಹೊಂದಿದವರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರನ್ನು ಅಲಕ್ಷಿಸುತ್ತಿರುವುದನ್ನು ಮನಗಂಡು ತಾನು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. |