ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸರ್ವಜ್ಞನಿಗೆ ಹೋಲಿಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಂತವರ ಬಗ್ಗೆ ಮಾತನಾಡುವುದಿಲ್ಲ ಎಂದು ಲೇವಡಿ ಮಾಡಿದರು.
ಗಣಿ ಧಣಿಗಳ ಹಿಡಿತಕ್ಕೆ ಸಿಲುಕಿರುವ ಬಿಜೆಪಿ ಸರಕಾರ ರಾಜ್ಯದ ನೆಲವನ್ನು ಆಂಧ್ರಕ್ಕೆ ಬಿಟ್ಟುಕೊಡಲು ಹೊರಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆಪಾದಿಸಿದರು.
ರಾಜ್ಯದ ನೆಲ ಆಂಧ್ರದ ಪಾಲಾಗಲು ಮುಖ್ಯಮಂತ್ರಿಗಳು ನೆರವಾಗಿದ್ದಾರಾ ಎಂಬ ಪ್ರಶ್ನೆಗೆ ಗೌಡರು, ಸರ್ವಜ್ಞರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು. ಆಂಧ್ರದ ಪಾಲಾಗಿರುವ ಭೂಮಿಯಲ್ಲಿ ಪುರಾತನ ಸುಗ್ಗಲಮ್ಮ ದೇವಾಲಯವನ್ನು ರಾಮನ ಹೆಸರು ಹೇಳುತ್ತಿರುವವರೇ ಕೆಡವಲು ನೆರವಾಗಿದ್ದಾರೆ ಎಂದು ಟೀಕಿಸಿದರು.
ಭಯೋತ್ಪಾದನಾ ಅಳಿಸಿ,ದೇಶ ಉಳಿಸಿ ಸಮಾರೋಪ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದ ಇಬ್ಬರು ಸ್ವಾಮೀಜಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಬುದ್ದಿ ಬಲಿಯದ ಮಕ್ಕಳಿಂದ ಪ್ರತಿಜ್ಞೆ ಮಾಡಿಸುವುದು ಸರಿಯೇ ಎಂದು ಪ್ರಶ್ನಿಸಿದರು. |