ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರಿಗೆ ಪ್ರಧಾನಿಯಾಗುವ ಅರ್ಹತೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಟೀಕಿಸಿದ್ದಾರೆ.ಆಡ್ವಾಣಿ ಅವರು ವಿವಾದಿತ ಮುಖ, ಎಲ್ಲರೂ ಒಪ್ಪುವಂತಹ ವ್ಯಕ್ತಿಯೂ ಅಲ್ಲ, ಹಾಗಾಗಿ ಅವರು ಪ್ರಧಾನಿ ಸ್ಥಾನಕ್ಕೆ ಅರ್ಹರಲ್ಲ ಎಂದು ಕುಹಕವಾಡಿದರು.ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಏರ್ಪಡಿಸಿದ್ದ ಯುವ ದೀಕ್ಷೆ ರಾಜ್ಯ ಮಟ್ಟದ ಬ್ಲಾಕ್ ಹಾಗೂ ಜಿಲ್ಲಾಧ್ಯಕ್ಷರ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರು ದಕ್ಷರು, ಸಜ್ಜನರು, ಸೋನಿಯಾ ಗಾಂಧಿ ಮಾರ್ಗದರ್ಶನದಲ್ಲಿ ದೇಶವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದವರು ಎಂದು ಹೇಳಿದರು.ಎನ್‌ಡಿಎ ಸರಕಾರ ಅಪವಾದಗಳಿಂದ ತುಂಬಿದ ಸರಕಾರವಾದರೆ, ಯುಪಿಎ ಸರಕಾರ ಅಪವಾದ ಮುಕ್ತ ಸರಕಾರವಾಗಿದೆ ಎಂದು ಹೇಳಿದ ಅವರು, ರಾಹುಲ್ ಗಾಂಧಿ ಅಂತಹ ಯುವ ನಾಯಕರು ಸಿಕ್ಕಿದ್ದು ಯುವ ಕಾಂಗ್ರೆಸ್ಸಿಗರ ಪುಣ್ಯ ಎಂದು ಬಣ್ಣಿಸಿದರು.ಯುವಕರು ನಾಳಿನ ಭವಿಷ್ಯದ ರೂವಾರಿಗಳು, ಈಗಲೇ ಸಂಸತ್ ಸದಸ್ಯ ಸ್ಥಾನ ಬೇಕು ಎಂದು ಕೇಳಬಾರದು, ನಿಮಗೂ ಆಕಾಂಕ್ಷೆ ಇದೆ, ಹಂಬಲಗಳಿವೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ನಾಡಿಗೆ ಸೇವೆ ಸಲ್ಲಿಸಬೇಕು ಎಂದು ಹೇಳಿದರು. |