ಕಳೆದ ಮೂರು ದಿನಗಳಿಂದ ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಕನ್ನಡ ಚಿತ್ರರಂಗದ ಅಮೃತಮಹೋತ್ಸವದ ವರ್ಣರಂಜಿತ ಕಾರ್ಯಕ್ರಮಕ್ಕೆ ಮಂಗಳವಾರ ಮುಕ್ತಾಯಗೊಳ್ಳಲಿದೆ.
ಮಾರ್ಚ್ 1ರಂದು ಮನರಂಜನಾ ಕಾರ್ಯಕ್ರಮದ ರಸದೌತಣದ ಮೂಲಕ ಚಾಲನೆ ದೊರೆತ ಅಮೃತ ಮಹೋತ್ಸವ ಇಂದು ಸಂಜೆ ತೆರೆ ಬೀಳಲಿದೆ. ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅಚ್ಚುಕಟ್ಟಾದ ಸಂಗೀತ ಕಾರ್ಯಕ್ರಮ ನೀಡಲು ತಾಂತ್ರಿಕ ಶಕ್ತಿಯ ಮಾಂತ್ರಿಕ ವಿ.ರವಿಚಂದ್ರನ್ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರೂ ಸಂಘಟನೆ ಕೊರತೆಯಿಂದಾಗಿ ಕಾರ್ಯಕ್ರಮ ಅವ್ಯವಸ್ಥೆಯ ಆಗರವಾಗಿದ್ದನ್ನು ಹೊರತುಪಡಿಸಿದರೆ, ಉಳಿದೆರಡು ದಿನದ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಚಿತ್ರರಂಗದ 75ವರ್ಷಗಳ ಈ ಸುದೀರ್ಘ ಪಯಣದಲ್ಲಿ ಚಿತ್ರರಂಗವನ್ನು ಕಟ್ಟಲು ಸಹಕರಿಸಿದ, ಪೋಷಿಸಿದ ಚಿತ್ರೋದ್ಯಮದ ಚೇತನಗಳಿಗೆ ನಮನ ಹಾಗೂ ಸನ್ಮಾನ ಸಮಾರಂಭ ಜೊತೆಗೆ ಚಿತ್ರರಂಗದ ಸವಾಲು ಸಮಸ್ಯೆ ಮುಂದಿನ ಯೋಜನೆಗಳ ಆತ್ಮಾವಲೋಕನ ನಡೆಯಿತು.
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟರಾದ ಡಾ.ಕಮಲಹಾಸನ್, ರಜನಿಕಾಂತ್, ಕನ್ನಡ ಚಿತ್ರರಂಗದ ಅಂಬರೀಷ್, ಡಾ.ವಿಷ್ಣುವರ್ಧನ್,ಪಾರ್ವತಮ್ಮ ರಾಜ್ ಕುಮಾರ್ ಸೇರಿದಂತೆ ಚಿತ್ರರಂಗದ ಘಟಾನುಘಟಿಗಳ ದಂಡೇ ಅಮೃತ ಮಹೋತ್ಸವಕ್ಕೆ ಒಟ್ಟಾಗಿ ದುಡಿದಿದೆ. |