ಆಂಧ್ರ ಹಾಗೂ ಕರ್ನಾಟಕ ಗಡಿ ವಿವಾದದ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಪಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿರುವ ಅವರು, ಹಿರಿಯ ರಾಜಕಾರಣಿಯಾಗಿರುವ ಗೌಡರು ಈ ರೀತಿಯ ಹೇಳಿಕೆ ನೀಡುವುದು ಅವರಿಗೆ ಶೋಭೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾಯಚೂರಿನ ಮಕ್ಕಿನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿದ್ದ ವೇಳೆಯಲ್ಲಿ ಮಾಧ್ಯಮವೊಂದರ ಜತೆ ಮಾತನಾಡಿದ ಅವರು, ಆಂಧ್ರ ಮತ್ತು ಕರ್ನಾಟಕ ಗಡಿ ಸಮೀಕ್ಷೆಗೆ ಸರಕಾರ ಸಿದ್ದವಿರುವುದಾಗಿ ಹೇಳಿದ್ದಾರೆ.
ಗಣಿ ವಿಚಾರದಲ್ಲಿ ದೇವೇಗೌಡರು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ ಮುಖ್ಯಮಂತ್ರಿಗಳು ಗೌಡರ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆಂಧ್ರದ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರು ಶಾಮೀಲಾಗಿ ಬಳ್ಳಾರಿ ಗಡಿಭಾಗದಲ್ಲಿ 36ಕಿ.ಮೀ.ಉದ್ದಕ್ಕೂ ಮುಕ್ಕಾಲು ಕಿ.ಮೀ.ಅಗಲದ ಅಮೂಲ್ಯ ಅದಿರು ಭೂಮಿಯನ್ನು ಆಂಧ್ರಕ್ಕೆ ನಕಲಿ ದಾಖಲೆಗಳಿಂದ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಗೌಡರು ಆರೋಪಿಸಿದ್ದರು.
ಗಡಿ ಒತ್ತುವರಿ ಬಗ್ಗೆ ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ದೂರು ನೀಡುವುದಾಗಿ ದೇವೇಗೌಡರು ಗುಡುಗಿದ್ದು, ಗಣಿಧಣಿಗಳೊಂದಿಗೆ ಮುಖ್ಯಮಂತ್ರಿಗಳು ನೇರವಾಗಿ ಶಾಮೀಲಾಗಿರುವುದಾಗಿ ಅವರು ಗಂಭೀರವಾಗಿ ದೂರಿದ್ದರು. |