ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ನಡೆಸುತ್ತಿರುವ ಆಪರೇಶನ್ ಕಮಲದ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇರ ಕೈವಾಡ ಇದೆ ಎಂದು ಸಂಸದೆ ತೇಜಸ್ವಿನಿ ಗಂಭೀರವಾಗಿ ಆರೋಪಿಸಿದ್ದಾರೆ.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ತನಗೆ ಟಿಕೆಟ್ ತಪ್ಪಿಸಲು ಕಾಂಗ್ರೆಸ್ ನಾಯಕರು ಕುತಂತ್ರ ನಡೆಸುತ್ತಿರುವುದಾಗಿ ಆರೋಪಿಸಿದ ಅವರು, ತಮ್ಮ ಸಹೋದರ ಡಿ.ಕೆ.ಸುರೇಶ್‌ಗೆ ಕನಕಪುರ ಕ್ಷೇತ್ರದಿಂದ ಟಿಕೆಟ್ ನೀಡಲು ಹುನ್ನಾರು ನಡೆಸುತ್ತಿರುವುದಾಗಿ ಡಿಕೆಶಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದರು.ಡಿಕೆಶಿಯವರು ವ್ಯವಸ್ಥಿತವಾಗಿ ಪಿತೂರಿ ನಡೆಸುತ್ತಿದ್ದಾರೆ ಅವರ ವರ್ತನೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡುವುದಾಗಿ ಆಕ್ರೋಶ ವ್ಯಕ್ತಪಡಿಸಿದ ತೇಜಸ್ವಿನಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಕೆಶಿಯವರು ಇಂತಹ ದ್ವೇಷ ರಾಜಕಾರಣದಿಂದಲೇ ಪಕ್ಷವನ್ನು ಅವನತಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.ತೇಜಸ್ವಿನಿ ರಮೇಶ್ ಅವರು ಬಿಜೆಪಿ ನಾಯಕ ಆಡ್ವಾಣಿ ಅವರನ್ನು ಭೇಟಿಯಾಗಲು ಹೋಗಿದ್ದರು ಎಂಬಂತಹ ಸುದ್ದಿಯನ್ನು ವಿಮರ್ಶೆ ಮಾಡದೆ ಹೇಳುತ್ತಾರಲ್ಲ, ಆಡ್ವಾಣಿಯವರನ್ನು ನಾನು ಇಲ್ಲಿಯೇ ಭೇಟಿ ಮಾಡಬೇಕಾ ಎಂದು ಪ್ರಶ್ನಿಸಿದರು, ಅಲ್ಲದೇ ಕುಮಾರಕೃಪಾದಲ್ಲಿ ಎಲ್ಲ ರಾಜಕಾರಣಿಗಳು ಇರುತ್ತಾರೆ, ಹಾಗೆಯೇ ನಾನು ಕೂಡ ಅಂದು ಅಲ್ಲಿದ್ದೆ, ಹಾಗಂತ ಆಡ್ವಾಣಿಯವರನ್ನು ಭೇಟಿಯಾಗಲು ಗಂಟೆಗಟ್ಟಲೆ ಕಾದು ಕುಳಿತಿದ್ದೆ ಅಂತ ಬಾಯಿಗೆ ಬಂದಂತೆ ಮಾತನಾಡುವುದು ಯಾವ ನ್ಯಾಯ ಎಂದು ಡಿಕೆಶಿಯನ್ನು ತರಾಟೆಗೆ ತೆಗೆದುಕೊಂಡರು.ಕಾಂಗ್ರೆಸ್‌ನಲ್ಲಿದ್ದವರನ್ನು ವ್ಯವಸ್ಥಿತವಾಗಿ ತೊರೆಯುವಂತೆ ಮಾಡುವಲ್ಲಿ ಡಿಕೆಶಿ ಕಿರುಕುಳ ನೀಡುತ್ತಿದ್ದಾರೆ, ಆ ಕಾರಣಕ್ಕಾಗಿಯೇ ಯೋಗೇಶ್ವರ್ ಕೂಡ ಬಿಜೆಪಿ ಸೇರುವತ್ತ ಒಲವು ತೋರಿದ್ದಾರೆ. ನನಗೂ ಕೂಡ ಕಿರುಕುಳ ನೀಡಿ ಬಿಜೆಪಿ ಸೇರುವಂತೆ ಮಾಡುವುದು ಅವರ ಉದ್ದೇಶ. ಆದರೆ ಯಾವುದೇ ಕಾರಣಕ್ಕೂ ನಾನು ಬಿಜೆಪಿ ಸೇರಲಾರೆ, ಕಾಂಗ್ರೆಸ್‌ನಲ್ಲಿಯೇ ಇದ್ದು ಡಿಕೆಶಿಯ ದೌರ್ಜನ್ಯದ ವಿರುದ್ಧ ಹೋರಾಡುವುದಾಗಿ ಸವಾಲು ಹಾಕಿದ್ದಾರೆ.ನಾನ್ಯಾವತ್ತೂ ತಾಯಿ ದ್ರೋಹ ಮಾಡಲಾರೆ, ನನ್ನ ಮೇಲೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಅವರ ಶ್ರೀರಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ತೇಜಸ್ವಿನಿ, ಕಾಂಗ್ರೆಸ್‌ನಲ್ಲಿರುವ ಒಕ್ಕಲಿಗರನ್ನು ಬದುಕಲು ಬಿಡಬಾರದು ಅಂತ ಡಿಕೆಶಿ ಹುನ್ನಾರ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು. |