ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಯ ಕುರಿತು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮುಖ್ಯಮಂತ್ರಿ ಅವರ ಏಕಪಕ್ಷೀಯ ತೀರ್ಮಾನ, ಕುಟುಂಬ ರಾಜಕಾರಣ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆಯಿಂದಾಗಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಅಭ್ಯರ್ಥಿಗಳ ಆಯ್ಕೆ ಕುರಿತು ಹಿರಿಯ ನಾಯಕರ ಹಾಗೂ ಪಕ್ಷದ ಕಾರ್ಯಕರ್ತರ ಮಾತಿಗೆ ಮನ್ನಣೆ ನೀಡದ ಮುಖ್ಯಮಂತ್ರಿಗಳು ತಮ್ಮ ಪುತ್ರನಿಗೆ ಟಿಕೆಟ್ ನೀಡುವ ಮೂಲಕ ವ್ಯಾಪಕ ಟೀಕೆಗೆ ಕಾರಣರಾಗಿದ್ದಾರೆ.
ರಾಜ್ಯದಲ್ಲಿ ಹೆಚ್ಚುವರಿ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಸಂಸದ ಅನಂತ್ ಕುಮಾರ್ ಅವರನ್ನು ವಿಸ್ವಾಸಕ್ಕೆ ತೆಗೆದುಕೊಳ್ಳದಿರುವುದರಿಂದ ಅವರು ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಸಿಎಂ ಪುತ್ರ ಎಂಬ ಕಾರಣಕ್ಕೆ ಹಿರಿಯ ಕಾರ್ಯಕರ್ತರನ್ನು ಕಡೆಗೆಣಿಸಿ ರಾಘವೇಂದ್ರ ಅವರಿಗೆ ಟಿಕೆಟ್ ನೀಡಬಾರದೆಂದು ಶಿವಮೊಗ್ಗ ಕ್ಷೇತ್ರದ ಜಿಲ್ಲಾ ಘಟಕ ಸ್ಪಷ್ಟವಾಗಿ ಒತ್ತಾಯಿಸಿತ್ತು. ಪಕ್ಷದ ದಿಲ್ಲಿ ವರಿಷ್ಠರಿಗೂ ದೂರು ರವಾನೆಯಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಧ್ಯಸ್ಥಿಕೆ ವಹಿಸಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, ರಾಘವೇಂದ್ರ ಅವರಿಗೆ ಟಿಕೆಟ್ ನೀಡುವ ಪ್ರಯತ್ನವನ್ನು ಕೈಬಿಡುವಂತೆಯೂ ಕಿವಿಮಾತು ಹೇಳಿದ್ದರು. ಆದರೆ ಇದ್ಯಾವುದಕ್ಕೂ ಜಗ್ಗದ ಯಡಿಯೂರಪ್ಪನವರು ತಾವು ಹಿಡಿದ ಹಠ ಸಾಧಿಸಿದ್ದಾರೆ. ದೇವರಾಣೆಗೂ ತನ್ನ ಮಗ ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಅಂತ ಸಾರ್ಜಜನಿಕವಾಗಿ ಹೇಳುತ್ತಲೇ, ಕುಟುಂಬ ರಾಜಕಾರಣಕ್ಕೆ ಮುಂದಾದ ಯಡಿಯೂರಪ್ಪನವರ ನಿಲುವು ಪಕ್ಷದೊಳಗೆ ಭಿನ್ನಮತದ ಕಿಡಿ ಹೊತ್ತಿಸಿದೆ. |