ಸಂಸತ್ ಸದಸ್ಯೆ ತೇಜಸ್ವಿನಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ವಾಕ್ಸಮರವನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ಆಪರೇಶನ್ ಕಮಲದ ಹಿಂದೆ ಡಿಕೆಶಿ ಅವರ ನೇರ ಕೈವಾಡ ಇರುವುದಾಗಿ ತೇಜಸ್ವಿನಿ ಅವರು ಗಂಭೀರವಾಗಿ ಆರೋಪಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿ, ಇಬ್ಬರು ನಾಯಕರ ಆರೋಪ-ಪ್ರತ್ಯಾರೋಪಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.
ವಾಕ್ಸಮರ ಕುರಿತಂತೆ ಇಬ್ಬರು ಉಭಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು. ಬಳಿಕ ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿಯೂ ಖರ್ಗೆ ಈ ಸಂದರ್ಭದಲ್ಲಿ ಹೇಳಿದರು. ಆ ನಿಟ್ಟಿನಲ್ಲಿ ಇಂದು ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. |