ಮಂಗಳೂರು ಪಬ್ ದಾಳಿ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯತ್ವದಿಂದ ವಜಾಗೊಂಡಿರುವ ನಿರ್ಮಲಾ ವೆಂಕಟೇಶ್ ಗುರುವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.
ಎಮ್ನೇಶಿಯ ಪಬ್ ದಾಳಿ ಕುರಿತಂತೆ ಪರಿಶೀಲನೆ ನಡೆಸಿ ನಿರ್ಮಲಾ ವೆಂಕಟೇಶ್ ಅವರು ಕೇಂದ್ರಕ್ಕೆ ಸಲ್ಲಿಸಿರುವ ವರದಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ ಈ ಸಂಬಂಧ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ರೇಣುಕಾ ಚೌಧುರಿ ಮತ್ತು ನಿರ್ಮಲಾ ನಡುವೆ ವಿರಸಕ್ಕೆ ಕಾರಣವಾಗಿತ್ತು. ಬಳಿಕ ನಿರ್ಮಲಾ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯತ್ವದಿಂದ ವಜಾಗೊಳಿಸಲಾಗಿತ್ತು.
ಕಾಂಗ್ರಸ್‌ನ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ನಿರ್ಮಲಾ ಅವರು ಫೆ.28ರಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು, ಅಲ್ಲದೇ ತನ್ನನ್ನು ಹುದ್ದೆಯಿಂದ ವಜಾಗೊಳಿಸಿರುವುದು ತೀವ್ರ ಆಘಾತಕ್ಕೆ ಈಡು ಮಾಡಿತ್ತು ಎಂದು ಪ್ರತಿಕ್ರಿಯಿಸಿದ್ದರು.
ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದ ನಿರ್ಮಲಾ ಅವರು ಗುರುವಾರ ಬಿಜೆಪಿಯ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಆದರೆ ಈ ಸಂದರ್ಭದಲ್ಲಿ ಪ್ರಕ್ಷದ ವರಿಷ್ಠರು ಯಾರೂ ಹಾಜರಿರಲಿಲ್ಲವಾಗಿತ್ತು.
ಪಕ್ಷದ ವತಿಯಿಂದ ಟಿಕೆಟ್ ನೀಡಿದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸಲು ಸಿದ್ದವಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಪಬ್ ದಾಳಿ ಕುರಿತಂತೆ ತಾನು ನೀಡಿರುವ ವರದಿಯನ್ನು ತಿರಸ್ಕರಿಸಿರುವ ಕೇಂದ್ರದ ನಿರ್ಧಾರದ ವಿರುದ್ಧ ಕಿಡಿಕಾರಿದ ಅವರು, ಇದರ ಹಿಂದೆ ರಾಜಕೀಯ ಪಿತೂರಿ ಅಡಗಿದೆ ಎಂದು ನಿರ್ಮಲಾ ಆರೋಪಿಸಿದರು. |