ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಇದರಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ಕ್ಷೇತ್ರದಿಂದ ಪುತ್ರ ರಾಘವೇಂದ್ರ ಕಣಕ್ಕಿಳಿಯಲಿದ್ದಾರೆಯೇ ಎಂಬ ಪ್ರಶ್ನೆಗೆ ಈ ಮೊದಲು ಯಡಿಯೂರಪ್ಪ, ದೇವರಾಣೆಗೂ ನನ್ನ ಮಗ ಲೋಕಸಭೆಗೆ ಸ್ಪರ್ಧಿಸುವುದಿಲ್ಲ, ಕುಟುಂಬ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ನಾವೇ, ಅಂತಹ ಸಂಪ್ರದಾಯಕ್ಕೆ ಬುನಾದಿ ಹಾಕುವುದು ಸರಿಯಲ್ಲ ಅಂತ ಮಗನಿಗೆ ಮನವರಿಕೆ ಮಾಡಿದ್ದು, ಯಾವುದೇ ಕಾರಣಕ್ಕೂ ಆತ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲಾರ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದ್ದರು.
ಆದರೆ ಇದೀಗ ಬಿಜೆಪಿ ಸಿದ್ದಪಡಿಸುತ್ತಿರುವ ಪಟ್ಟಿಯಲ್ಲಿ ಸಿಎಂ ಪುತ್ರ ರಾಘವೇಂದ್ರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ, ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ, ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂಬುದಾಗಿ ಯಡಿಯೂರಪ್ಪ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಯಡಿಯೂರಪ್ಪ ಹಾಗೂ ಸದಾನಂದ ಗೌಡ, ಸಂಸದ ಅನಂತ್ ಕುಮಾರ್ ನಡುವೆ ಸಾಕಷ್ಟು ವೈಮಸ್ಸು ಕಾಣಿಸಿಕೊಂಡಿದೆ. ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸುತ್ತಿದ್ದ ಬಿಜೆಪಿಯೇ ಇದೀಗ ಕುಟುಂಬ ರಾಜಕಾರಣಕ್ಕೆ ಬಲಿಯಾಗುತ್ತಿದ್ದು, ಪಕ್ಷದಲ್ಲಿಯೇ ಅಸಮಾಧಾನದ ಹೊಗೆ ಭುಗಿಲೆದ್ದಿದೆ. |