ರಾಜ್ಯದಲ್ಲಿ ಬಿಜೆಪಿಗೆ ಜೀವ ಕೊಟ್ಟವರು ನಾವು. ಅಂದು ಇಲ್ಲದ ಥರ್ಡ್ ಗ್ರೇಡ್ ಇಂದು ಹೇಗಾಯ್ತು? ಮೂರನೇ ದರ್ಜೆ ಯಾರು ಎಂಬುದು ಲೋಕಸಭೆ ಚುನಾವಣೆಯಲ್ಲಿ ತಿಳಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ತೃತೀಯ ರಂಗದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಪಕ್ಷಕ್ಕೆ ಗ್ರೇಡ್ ನೀಡುವ ಕೆಲಸವನ್ನು ಮತದಾರರು ಮಾಡುತ್ತಾರೆ. ಇವರಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕೀಳುಮಟ್ಟದ್ದು ಎನ್ನಲು ಹಲವು ಉದಾಹರಣೆಗಳಿವೆ. ಆಪರೇಷನ್ ಕಮಲ ಮೂರನೇ ದರ್ಜೆಯಲ್ಲವೆ?ನಮ್ಮದು ಚಿಕ್ಕ ಪಕ್ಷ ಇರಬಹುದು. ಆದರೆ, ಯಾರ ಮನೆ ಬಾಗಿಲಿಗೂ ಹೋಗುವುದಿಲ್ಲ. ಪ್ರಧಾನಿ ಹುದ್ದೆಗಾಗಿ ಎಲ್.ಕೆ. ಅಡ್ವಾಣಿ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಮನೆಗೆ ಹೋಗಿದ್ದು ಥರ್ಡ್ ಗ್ರೇಡ್ತನ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಅಮೂಲ್ಯ ಸಂಪತ್ತು ಆಂಧ್ರದ ಪಾಲಾಗಿರುವ ಹಿಂದೆ ರಾಜ್ಯ ಸರಕಾರದ ಪರೋಕ್ಷ ಬೆಂಬಲವಿದೆ. 36 ಕಿ.ಮೀ ಉದ್ದದ ಗಡಿ ಒತ್ತುವರಿಯಾಗಿದೆ. ಆದರೆ ಪರವಾನಿಗೆ ಪಡೆದು ಗಣಿಗಾರಿಕೆ ಮಾಡುತ್ತಿರುವ ರಾಮ್‌ಸನ್ ಮಿನರಲ್ಸ್ ಮಾಲೀಕರು ಬಳ್ಳಾರಿ ಗಣಿಧಣಿಗಳಿಂದ ಬೆದರಿಕೆ ಎದುರಿಸುತ್ತಿದ್ದಾರೆ. ಸಹಾಯ ಕೇಳಲು ಬಂದ ಅವರಿಗೆ ಯಾವುದೇ ನೆರವು ನೀಡದೆ ಯಡಿಯೂರಪ್ಪ ಹಿಂದೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು. |