ಮೈಸೂರು ಹಾಗೂ ಸುಳ್ಯದ ಕೆಲವು ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಲು ಅಡ್ಡಿ ಮಾಡಿರುವ ಸಂಘಟನೆಗಳ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ.ಮುಮ್ತಾಜ್ ಅಲಿ ಖಾನ್ ಗೃಹ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, ಬುರ್ಖಾ ಧರಿಸುವುದು ಅವರವರ ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದು, ಅಲ್ಲದೇ ಕಾಲೇಜುಗಳಲ್ಲಿ ಬುರ್ಖಾ ಧರಿಸಲೇಬೇಕೆಂಬ ನಿಯಮವಿಲ್ಲ ಎಂದು ತಿಳಿಸಿದರು.
ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಸಮವಸ್ತ್ರ ಇರುವುದಿಲ್ಲ. ಸಮವಸ್ತ್ರ ಇದ್ದರೆ ಬುರ್ಖಾ ಹಾಕಲು ಅಡ್ಡಿ ಮಾಡಬಹುದು, ಆದರೆ ಒಂದೆರಡು ಕಾಲೇಜುಗಳಲ್ಲಿ ಅಡ್ಡಿ ಮಾಡಿದ್ದಾರೆ. ಗಲಾಟೆಯೂ ಆಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.
ಧರ್ಮನಿರಪೇಕ್ಷತೆಗೂ ಬುರ್ಖಾ ಧರಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಬುರ್ಖಾ ಧರಿಸುವುದು ಅಥವಾ ಬಿಡುವುದು ಅವರವರ ಇಷ್ಟ. ಬೇಕಾದರೆ ಹಾಕಬಹುದು ಇಲ್ಲದಿದ್ದರೆ ಬಿಡಬಹುದು. ಇತ್ತೀಚೆಗೆ ಬುರ್ಖಾ ಧರಿಸುವವರ ಸಂಖ್ಯೆ ಕಡಿಮೆಯಾಗಿದೆ. ಇನ್ನು ಹತ್ತು ವರ್ಷ ಹೋದರೆ ಅವರೇ ಬಿಡುತ್ತಾರೆ. ಹಾಗಾಗಿ ಬಲವಂತ ಬೇಡ ಎಂದು ಸಚಿವರು ಸಲಹೆ ನೀಡಿದರು. |