ಎಮ್ನೇಶಿಯ ಪಬ್ ದಾಳಿ ಪ್ರಕರಣದ ರಾದ್ಧಾಂತ ಇನ್ನೂ ಮುಂದುವರಿದಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯೊಳಗೆ ಪ್ರವೇಶಿಸದಂತೆ ನಿಮ್ಮನ್ನು ಯಾಕೆ ತಡೆಯಬಾರದು ಎಂದು ವಿವರಣೆ ಕೇಳಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್‌ಗೆ ಜಿಲ್ಲಾಡಳಿತ ಷೋಕಾಸ್ ನೋಟಿಸ್ ಜಾರಿ ಮಾಡಿದೆ.ಪಬ್ ದಾಳಿಗೆ ಸಂಬಂಧಿಸಿದಂತೆ ಈ ಮೊದಲು ಜಿಲ್ಲಾಡಳಿತ ಶ್ರೀರಾಮಸೇನೆಯ ಐದು ಮಂದಿಗೆ ಗಡಿಪಾರು ಕುರಿತು ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿತ್ತು. ಆದರೆ ಮೂರು ಮಂದಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು, ಉಳಿದ ಇಬ್ಬರನ್ನು ಜಿಲ್ಲಾಡಳಿತ ಗಡಿಪಾರು ಮಾಡಿತ್ತು.ಈ ಕ್ರಮದ ನಂತರ ಮುತಾಲಿಕ್ ಅವರು ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಹತ್ತು ಸಾವಿರ ಮಂದಿಯೊಂದಿಗೆ ನಗರ ಪ್ರವೇಶಿಸುತ್ತೇನೆ, ತಾಕತ್ತಿದ್ದರೆ ನನ್ನನ್ನು ತಡೆಯಿರಿ ಎಂದು ಜಿಲ್ಲಾಡಳಿತಕ್ಕೆ ಸವಾಲು ಹಾಕಿದ್ದರು.ಆ ನಿಟ್ಟಿನಲ್ಲಿ ದಕ್ಷಿಣ ಕನ್ನಡಕ್ಕೆ ಆಗಮಿಸುವ ನಿಮ್ಮನ್ನು ಯಾಕೆ ತಡೆಯಬಾರದು ಎಂದು ವಿವರಣೆ ಕೇಳಿ ಮುತಾಲಿಕ್‌ಗೆ ನೋಟಿಸ್ ಜಾರಿ ಮಾಡಿರುವುದಾಗಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ತಿಳಿಸಿದ್ದು, ನೋಟಿಸ್‌ಗೆ ಮಾ.12ರೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು. |