ಭಾರತೀಯ ಜನತಾ ಪಕ್ಷ ಕೂಡ ಈಗ ಅಪ್ಪ-ಮಕ್ಕಳ ಪಕ್ಷವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಿರುಗೇಟು ನೀಡಿದ್ದಾರೆ.ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದು ಟೀಕಿಸುತ್ತಿದ್ದ ಬಿಜೆಪಿಯೂ ಅದಕ್ಕೆ ಹೊರತಾಗಿಲ್ಲ ಎಂಬುದು ಸಾಬೀತಾಗಿದೆ ಎಂದು ಕಿಡಿಕಾರಿದ ಅವರು, ಶಿವಮೊಗ್ಗ ಕ್ಷೇತ್ರದಿಂದ ತನ್ನ ಮಗ ದೇವರಾಣೆಗೂ ಸ್ಪರ್ಧಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಡಂಗುರ ಸಾರಿದ್ದರು. ಆದರೆ ಈಗ ಬಿಜೆಪಿಯೂ ಕುಟುಂಬ ರಾಜಕಾರಣ ಮಾಡುತ್ತಿದೆಯಲ್ಲ ಇದ್ಯಾವ ರಾಜಕಾರಣ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ನದ್ದು ಕುಟುಂಬ ರಾಜಕಾರಣ, ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದೆಲ್ಲ ರಾಜ್ಯದ ಮತದಾರರ ಮುಂದೆ ಬೊಬ್ಬೆ ಹಾಕುತ್ತಿದ್ದ ಮುಖ್ಯಮಂತ್ರಿಗಳೇ ಸ್ವತಃ ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ. ಅಷ್ಟೇ ಅಲ್ಲ ಉದಾಸಿ ಅವರ ಪುತ್ರನಿಗೆ ಟಿಕೆಟ್ ನೀಡಲಾಗಿದೆ. ಉಮೇಶ್ ಕತ್ತಿ ಸಹೋದರನಿಗೆ, ಶ್ರೀರಾಮ ರೆಡ್ಡಿ ಸಹೋದರಿಗೆ ಟಿಕೆಟ್ ನೀಡಿರುವುದು ಯಾವ ರಾಜಕಾರಣ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. |