ಪಕ್ಷದಿಂದ ಅಮಾನತುಗೊಂಡಿರುವ ಖುಸ್ರೋ ಖುರೇಶಿ ಅವರನ್ನು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿರುವುದಕ್ಕೆ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಖುರೇಶಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೈ ಬಿಡುವಂತೆ ಕಾರ್ಯಕರ್ತರು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.
ಅಶಿಸ್ತು, ಪಕ್ಷದ ವರಿಷ್ಠರ ನಿಂದನೆ ಮೊದಲಾದ ಆರೋಪದ ಮೇಲೆ ಖುರೇಶಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಅಮಾನತು ಆದೇಶ ಇನ್ನೂ ರದ್ದಾಗಿಲ್ಲದಿರುವುದರಿಂದ ಅವರು ಪಕ್ಷದ ಸದಸ್ಯರಲ್ಲ. ಪಕ್ಷದಲ್ಲೇ ಇಲ್ಲದ ವ್ಯಕ್ತಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿರುವುದು ಅಸಮಾಧಾನಕ್ಕೆ ಕಾತಣವಾಗಿದೆ.
ಖುಸ್ರೋ ಖುರೇಶಿ ಪಕ್ಷಕ್ಕೆ ಬಂದಿದ್ದೇ ಇತ್ತೀಚೆಗೆ. ಪಕ್ಷದ ಸಂಘಟನೆ ಮಾಡದ ವ್ಯಕ್ತಿಗೆ ಮನ್ನಣೆ ನೀಡುವುದಾದರೆ, ಪಕ್ಷಕ್ಕಾಗಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದಂತಾಗುವುದಲ್ಲವೇ? ಎಂಬುದು ಅತೃಪ್ತರ ಪ್ರಶ್ನೆಯಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು ಅರುಣ್ ಜೇಟ್ಲಿ ಅವರಿಗೆ ಖುರೇಶಿ ದುಂಬಾಲು ಬಿದ್ದಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ಅನಂತ್ ಕುಮಾರ್ ಬಳಿಯೂ ಟಿಕೆಟ್‌ಗಾಗಿ ಅಲವತ್ತುಕೊಂಡಿದ್ದರು. ಟಿಕೆಟ್ ಸಿಗದಿದ್ದಾಗ ಕುಪಿತಗೊಂಡ ಖುರೇಶಿ, ಪಕ್ಷದ ಮುಖಂಡರ ವಿರುದ್ಧವೇ ಬಂಡಾಯದ ಬಾವುಟ ಹಾರಿಸಿದರು. ಕೆಲವು ಬೆಂಬಲಿಗರನ್ನು ತಂದು ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. |