'ಸರಸ್' ಲಘು ವಿಮಾನವೊಂದು ಆಕಸ್ಮಿಕವಾಗಿ ನೆಲಕ್ಕಪ್ಪಳಿಸಿ ಬೆಂಕಿ ಹಿಡಿದ ಪರಿಣಾಮ ವಿಂಗ್ ಕಮಾಂಡರ್ ಪ್ರವೀಣ್ ಸೇರಿದಂತೆ ಮೂರು ಮಂದಿ ಜೀವಂತವಾಗಿ ದಹನವಾದ ಘಟನೆ ಮೆಗಾಸಿಟಿ ಲೇಔಟ್‌ನ ಶೇಷಗಿರಿಹಳ್ಳಿ ಬಳಿ ಶುಕ್ರವಾರ ಮಧ್ನಾಹ್ನ ಸಂಭವಿಸಿದೆ.
ಶೇಷಗಿರಿಹಳ್ಳಿ ಸಮೀಪ ಇಂದು ಮಧ್ನಾಹ್ನ ಸರಸ್ ಬಹುಪಯೋಗಿ ಲಘು ವಿಮಾನ ಏಕಾಏಕಿ ಭಾರೀ ಶಬ್ದದೊಂದಿಗೆ ನೆಲಕ್ಕಪ್ಪಳಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ವಿಮಾನದಲ್ಲಿದ್ದ ಮೂವರು ಸಜೀವವಾಗಿ ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ವಿಮಾನದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಲಭಿಸಿಲ್ಲ. ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆಯೂ ತಿಳಿದು ಬಂದಿಲ್ಲ.
ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ. |