ತನ್ನ ವಿರುದ್ಧ ಕಣಕ್ಕಿಳಿಯುತ್ತಿರುವುದು ರಾಘವೇಂದ್ರ ಅಲ್ಲ, ಅವರ ಅಪ್ಪ ಬಿ.ಎಸ್.ಯಡಿಯೂರಪ್ಪ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಆದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣಾ ಹೋರಾಟಕ್ಕೆ ತಾನು ಸಜ್ಜಾಗಿದ್ದು ಸರ್ವತಯಾರಿ ನಡೆಸಿರುವುದಾಗಿ ತಿಳಿಸಿದ್ದಾರೆ.
ಕುಟುಂಬ ರಾಜಕಾರಣ ವಿರೋಧಿಸಿಲ್ಲ: ಯಡಿಯೂರಪ್ಪ ಸ್ವಾತಂತ್ರ್ಯ ಬಂದಾಗಿನಿಂದಲೂ ತಾವು ಕುಟುಂಬ ರಾಜಕಾರಣವನ್ನು ವಿರೋಧಿಸಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದು ಅಪ್ಪ-ಮಗನ ಪ್ರಶ್ನೆಯಲ್ಲ. ಸಾಮರ್ಥ್ಯದ ಪ್ರಶ್ನೆ. ಶಿವಮೊಗ್ಗದಲ್ಲಿ ಬಂಗಾರಪ್ಪ ವಿರುದ್ಧ ಗೆಲ್ಲುವ ಅಭ್ಯರ್ಥಿ ಬೇಕಿತ್ತು. ಈ ಸಾಮರ್ಥ್ಯ ರಾಘವೇಂದ್ರ ಅವರಿಗಿದೆ. ಹೀಗಾಗಿ ಹೈಕಮಾಂಡ್ ಅವರನ್ನು ಕಣಕ್ಕೆ ಇಳಿಸಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಶಿವಮೊಗ್ಗ ಅತ್ಯಂತ ಪ್ರಮುಖ ಕ್ಷೇತ್ರ. ಇಲ್ಲಿ ಬಂಗಾರಪ್ಪ ಅವರು ಸ್ಪರ್ಧೆಗೆ ಇಳಿಯುವುದರಿಂದ ಅಲ್ಲಿ ಗೆಲ್ಲುವ ಅಭ್ಯರ್ಥಿ ಬೇಕಿತ್ತು. ಸ್ಥಳೀಯ ಘಟಕ, ಶಾಸಕರು ರಾಘವೇಂದ್ರ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಆದ್ದರಿಂದ ಹೈಕಮಾಂಡ್ ಟಿಕೆಟ್ ನೀಡಿದೆ. ರಾಘವೇಂದ್ರ ಅವರು ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದ್ದಾರೆ. ಕಳೆದ ಚುನಾವಣೆ ವೇಳೆಯೂ ಉತ್ತಮ ಕೆಲಸ ಮಾಡಿದ್ದರು. ಗೆಲುವಿನ ಮಾನದಂಡವನ್ನು ಆಧರಿಸಿ ಅವರನ್ನು ಹೈಕಮಾಂಡ್ ಕಣಕ್ಕಿಳಿಸಿದೆ ಇದರಲ್ಲಿ ತನ್ನ ಪಾತ್ರವೇನು ಇಲ್ಲ ಎಂದು ಪುತ್ರನ ಆಯ್ಕೆಯನ್ನು ಸ್ಪಷ್ಟಪಡಿಸಿದರು. |