ಹುಡುಗಿಯನ್ನು ಹುಡುಗನೊಬ್ಬ ಚುಡಾಯಿಸಿದ್ದು, ಹುಡುಗಿಯ ತಂದೆ ಹುಡುಗನಿಗೆ ಇರಿಯುಲು ಪ್ರಯತ್ನಿಸಿದ ಪರಿಣಾಮ ಸಿಟ್ಟಿಗೆದ್ದ ಹುಡುಗನ ತಂದೆ ಗುಂಡುಹಾರಿಸಿದ ಪರಿಣಾಮ ಐದು ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಈ ದುರ್ಘಟನೆಯು ಇಲ್ಲಿಗೆ ಸಮೀಪದ ಹುಣಸೂರು ತಾಲೂಕಿನ ಬೂತಾಳೆ ಪೇನದಹಳ್ಳಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹುಡುಗಿಯೊಬ್ಬಾಕೆಯನ್ನು ಚಂದ್ರಶೇಖರ್ ಎಂಬಾತ ಚುಡಾಯಿಸಿದ್ದ. ಇದರಿಂದ ವ್ಯಗ್ರಗೊಂಡ ಹುಡುಗಿಯ ತಂದೆ ಶಂಕರ ಹಾಗೂ ಸಹೋದರ ಮಹದೇವ ಎಂಬಿಬ್ಬರು ಚಂದ್ರಶೇಖರನಿಗೆ ಇರಿಯಲು ಪ್ರಯತ್ನಿಸಿದ್ದರು. ಅದಾಗ್ಯೂ, ಚಂದ್ರಶೇಖರ ತನ್ನ ಮೇಲಿನ ಆಕ್ರಮಣದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಈ ಸುದ್ದಿ ತಿಳಿದ ಚಂದ್ರಶೇಖರನ ತಂದೆ ಸಂಗಪ್ಪ ಶಂಕರನ ಮನೆಗೆ ತೆರಳಿ ಗುಂಡು ಹಾರಿಸಿದ್ದು, ಪರಿಣಾಮ ಐದು ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳಲ್ಲಿ ಶಂಕರ ಹಾಗೂ ಇತರ ನಾಲ್ವರು ಸೇರಿದ್ದು, ಇವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. |