ಲೋಕಸಭಾ ಚುನಾವಣೆಗಳ ಸಮಯದಲ್ಲಿ ನೀವು ಮಾಹಿತಿದಾರರಾಗಿ ಕಾರ್ಯವಹಿಸಿದಲ್ಲಿ ಚುನಾವಣಾ ಆಯೋಗವು ನಿಮಗೆ ಹಣದ ಪ್ರತಿಫಲ ನೀಡಲಿದೆ. ಮತದಾರರಿಗೆ ಹಂಚಲು ಮದ್ಯವನ್ನು ಸರಬರಾಜು ಮಾಡುತ್ತಿರುವ ಖಚಿತ ಮಾಹಿತಿ ನೀಡಿದಲ್ಲಿ ಅಂತಹವರಿಗೆ ಪ್ರೋತ್ಸಾಹವಾಗಿ ಹಣ ನೀಡಲಾಗುವುದು ಎಂಬುದಾಗಿ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ಎಂ.ಎನ್. ವಿದ್ಯಾಶಂಕರ್ ಶುಕ್ರವಾರ ಹೇಳಿದ್ದಾರೆ.
ಮದ್ಯವಶಪಡಿಸಿಕೊಳ್ಳುವಂತಹ ಮಾಹಿತಿ ನೀಡಿದವರಿಗೆ ಖಂಡಿತವಾಗಿಯೂ ಸಂಭಾವನೆ ನೀಡಲಾಗುವುದು ಎಂಬುದಾಗಿ ವಿದ್ಯಾಶಂಕರ್ ಹೇಳಿದ್ದಾರೆ. ಇದಕ್ಕೆ ಬೇಕಿರುವ ಬಜೆಟ್ ಅನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಒದಗಿಸದ್ದಾರೆ ಎಂದೂ ಅವರು ಹೇಳಿದ್ದಾರೆ.
ಮತದಾರರನ್ನು ಪ್ರಲೋಭನೆಗೊಳಪಡಿಸಲು ಪ್ರಮುಖವಾಗಿ ರಾಜಕೀಯ ಪಕ್ಷಗಳು ಮದ್ಯವನ್ನು ಬಳಸುತ್ತವೆ ಎಂದು ಚುನಾವಣಾ ಅಧಿಕಾರಿ ಹೇಳಿದರು. ಅದಾಗ್ಯೂ, ಸಂಭಾವನೆ ಕುರಿತು ನಿರ್ದಿಷ್ಟವಾಗಿ ತಿಳಿಸಲು ನಿರಾಕರಿಸಿದರು ಅಲ್ಲದೆ, ಸಂಭಾವನೆಯನ್ನು ಹೇಗೆ ಲೆಕ್ಕಾಚಾರ ಮಾಡಲಾಗುವುದು ಎಂಬುದನ್ನೂ ವಿವರಿಸಲಿಲ್ಲ.
ಕರ್ನಾಟಕದಲ್ಲಿ ಎರಡು ಹಂತದ ಮತದಾನ ನಡೆಯಲಿದ್ದು, 28 ಕ್ಷೇತ್ರಗಳಿಗೆ ಎಪ್ರಿಲ್ 23 ಹಾಗೂ ಎಪ್ರಿಲ್ 30ರಂದು ಚುನಾವಣೆಗಳು ನಡೆಯಲಿವೆ. |