ಬೆಂಗಳೂರಿನ ಕಲಾಸಿ ಪಾಳ್ಯದಲ್ಲಿ ಪೊಲೀಸರು ಸಿಮಿ ಉಗ್ರನೊಬ್ಬನನ್ನು ಬಂಧಿಸಿದ್ದು, ಈತ ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿಯಾಗಿದ್ದಾನೆ. ಸರ್ಫರೋಜ್ ನವಾಜ್ ಎಂಬಾತ ಶನಿವಾರ ಬಂಧನಕ್ಕೀಡಾಗಿದ್ದಾನೆ. ಈತನನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದು ಮಾರ್ಚ್ 14ರವರೆಗೆ ಪೊಲೀಸರ ವಶಕ್ಕೊಪ್ಪಿಸಲಾಗಿದೆ.
ಸರ್ಫರೋಜ್ ನವಾಜ್ ಮೂಲತಃ ಕೇರಳದ ಎರ್ನಾಕುಲಂನವನು. ಈತ 2007ರಲ್ಲಿ ಬಾಂಗ್ಲಾ ಮೂಲಕ ಭಾರತ ಪ್ರವೇಶಿಸಿದ್ದ. ಲಷ್ಕರ್ ನಂತಹ ಉಗ್ರವಾದಿ ಸಂಘಟನೆಗಳ ಸಂಪರ್ಕವನ್ನು ಈತ ಹೊಂದಿದ್ದಾನೆ ಅಲ್ಲದೆ ಸಿಮಿ ಕಾರ್ಯನಾಗಿದ್ದಾನೆ.ಕೆಲ ಕಾಲ ಸಿಮಿ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದನೆನ್ನಲಾಗಿದೆ.
ಜುಲೈ 25, 2008ರಲ್ಲಿ ನಡೆದ ಬೆಂಗಳೂರು ಸ್ಫೋಟದಲ್ಲಿ ನವಾಜ್ ಭಾಗಿಯಾಗಿ, ಸ್ಫೋಟಕಗಳನ್ನು ಎಲ್ಲೆಲ್ಲಿ ಇಡಬೇಕು ಎಂಬುದನ್ನೂ ಈತನೇ ನಿರ್ಧರಿಸಿದ್ದ. ಪಾಕಿಸ್ತಾನದಲ್ಲಿ ಭಯೋತ್ಪಾದನೆಯ ತರಬೇತಿ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನವಾಜ್ ಇನ್ನೂ ಯಾವ್ಯಾವ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ. |